ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ವಿಧಿಸಲಾಗಿರುವ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಮತ್ತು ಅಚಾನಕ್ ಹಾರಾಟ ರದ್ದುಪಡಿಸುವ ಘಟನೆಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಅನೇಕ ಮಾರ್ಗಗಳಲ್ಲಿ ಪ್ರಯಾಣ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.
ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ದೇಶದಿಂದ ವಿವಿಧ ರಾಷ್ಟ್ರಗಳಿಗೆ ತೆರಳುವ ವಿಮಾನಗಳು ಬಹುತೇಕವಾಗಿ ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಂಚರಿಸುತ್ತವೆ.
ಈ ಮಾರ್ಗಗಳಲ್ಲಿ ಉಂಟಾದ ವ್ಯತ್ಯಯಗಳಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಹೆಚ್ಚಿದ ಪ್ರಯಾಣ ವೆಚ್ಚದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಪಡಿಸಲು ಮುಂದಾಗುತ್ತಿದ್ದಾರೆ.
ಸಾಮಾನ್ಯವಾಗಿ ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಿಂದ ಪ್ರತಿದಿನ ಸುಮಾರು 25 ರಿಂದ 30 ವಿಮಾನಗಳು ಬೆಂಗಳೂರಿಗೆ ಆಗಮಿಸುತ್ತಿದ್ದವು. ಆದರೆ, ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದ ಅನೇಕ ವಿಮಾನ ಸಂಸ್ಥೆಗಳು ತಮ್ಮ ಹಾರಾಟಗಳನ್ನು ಸ್ಥಗಿತಗೊಳಿಸಿರುವುದರಿಂದ ಈ ಸಂಪರ್ಕ ಗಂಭೀರವಾಗಿ ಕುಂಠಿತವಾಗಿದೆ.
ಈ ಬೆಳವಣಿಗೆಯಿಂದ ದೇಶಾದ್ಯಂತ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 40%ರವರೆಗೆ ಕುಸಿತ ಕಂಡುಬಂದಿದ್ದು, ಬೆಂಗಳೂರಿನಂತಹ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ದ್ವಾರಗಳಿಗೆ ಇದು ನೇರ ಹೊಡೆತ ನೀಡಿದೆ.



