HomeGadag Newsರೈತ ಬಾಂಧವರಿಗೆ ಸಲಹೆ

ರೈತ ಬಾಂಧವರಿಗೆ ಸಲಹೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ರೈತರು ಹೆಸರು, ಮುಸುಕಿನ ಜೋಳ, ಜೋಳ, ಶೇಂಗಾ ಬೆಳೆಗಳನ್ನು ಏಕಬೆಳೆ ಪದ್ಧತಿಯಲ್ಲಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುವುದರ ಜೊತೆಗೆ ಕೀಟ/ರೋಗ ಬಾಧೆ ಹೆಚ್ಚಾಗುವ ಸಾಧ್ಯತೆ ಇದೆ.

ರೈತರು ಏಕದಳ ಧಾನ್ಯಗಳ ಜೊತೆಗೆ ದ್ವಿದಳ ಧಾನ್ಯಗಳನ್ನು ಹಾಗೂ ಎಣ್ಣೆಕಾಳು ಬೆಳೆಗಳ ಜೊತೆಗೆ ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಬೆಳೆದಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಬಹುದು. ಮುಖ್ಯ ಬೆಳೆಯ ಜೊತೆ ಹೆಚ್ಚುವರಿಯಾಗಿ ಮಿಶ್ರ ಬೆಳೆಯ ಇಳುವರಿಯನ್ನು ಪಡೆಯುವುದರಿಂದ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ದ್ವಿದಳಧಾನ್ಯ ಬೆಳೆಗಳು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಬೇರುಗಳಲ್ಲಿ ಸ್ಥಿರೀಕರಿಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು. ಬೆಳೆ ವೈವಿಧ್ಯತೆ ಇರುವುದರಿಂದ ಮುಖ್ಯ ಬೆಳೆಗೆ ಬರುವ ಕೀಟ/ರೋಗ ಬಾಧೆಯನ್ನು ಕೂಡ ಗಣನೀಯವಾಗಿ ಕಡಿಮೆ ಮಾಡಬಹುದು. ಅಲ್ಲದೇ, ಕುಟುಂಬಕ್ಕೆ ಬೇಕಾಗುವ ಸಮತೋಲನ ಆಹಾರ ಉತ್ಪಾದನೆ ಮಾಡುವುದರ ಮೂಲಕ ಕುಟುಂಬದ ಆರೋಗ್ಯವನ್ನು ಕಾಪಾಡಬಹುದಾಗಿದೆ.

ಮಧ್ಯಮ ಆಳದ ಕಪ್ಪು ಮಣ್ಣಿಗೆ ತೊಗರಿ ಆಧಾರಿತ ಅಂತರ ಬೆಳೆ ಪದ್ಧತಿಯಲ್ಲಿ 1 ಸಾಲು ತೊಗರಿ ಮತ್ತು 2 ಸಾಲು ನವಣೆಯನ್ನು ಬೆಳೆಯುವುದು ಲಾಭದಾಯಕ. ಶೇಂಗಾ+ತೊಗರಿ/ಸಜ್ಜೆ/ನವಣೆ(4:1 ಅಥವಾ 11:1) ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ. ಔಡಲ+ತೊಗರಿ(1:1), ಔಡಲ+ಶೇಂಗಾ(1:3, 1:5, 1:7), ಔಡಲ+ಸೂರ್ಯಕಾಂತಿ(1:1), ಔಡಲ+ಸಜ್ಜೆ(1:3), ಔಡಲ+ಜೋಳ(1:3), ಔಡಲ+ನವಣೆ/ಬರಗು(1:3) ಅಂತರ ಬೆಳೆಯಾಗಿ ಬೆಳೆಯಬಹುದು.

ಒಣ ಬೇಸಾಯದಲ್ಲಿ ಇಡೀ ಹತ್ತಿ ಬೆಳೆಗಿಂತ, ಹತ್ತಿ+ಈರುಳ್ಳಿ (1:5), ಹತ್ತಿ+ಮೆಣಸಿನಕಾಯಿ (1:1), ಹತ್ತಿ+ ಶೇಂಗಾ (1:3), ಹತ್ತಿ+ಹೆಸರು (1:1), ಹತ್ತಿ+ಬೀನ್ಸ್ (1:1), ಹತ್ತಿ+ಕೊತ್ತಂಬರಿ (1:2), ಹೈಬ್ರಿಡ್ ಬಿಟಿ ಹತ್ತಿ+ಕೊತ್ತಂಬರಿ (1:2) ನೀರಾವರಿಯಲ್ಲಿ ಹತ್ತಿ+ಸೋಯಾಅವರೆ (1:3), ಹತ್ತಿ+ಮೆಣಸಿನಕಾಯಿ (1:1) ಹಾಗೂ ಹತ್ತಿ+ಈರುಳ್ಳಿ (1:5) ಅಂತರಬೆಳೆ ಪದ್ಧತಿ ಸೂಕ್ತ. ಮುಸುಕಿನ ಜೋಳದ ಜಮೀನಿನ ಸುತ್ತಲೂ ಎಳ್ಳು/ಹುಚ್ಚೆಳ್ಳು/ಹರಳನ್ನು 4-6 ಸಾಲು ಬೆಳೆಯಬಹುದು.

ಬೆಳೆ ಪರಿವರ್ತನೆ, ಅಂತರ ಬೆಳೆ ಪದ್ಧತಿ ಹಾಗೂ ಮಿಶ್ರ ಬೆಳೆ ಪದ್ಧತಿಗಳನ್ನು ಕೈಗೊಳ್ಳಲು ರೈತ ಬಾಂಧವರಲ್ಲಿ ಮನವಿ ಮಾಡಲಾಗಿದೆ. ಇದರಿಂದ ಕೀಟ ರೋಗದ ಬಾಧೆ ಕಡಿಮೆಯಾಗಿ ಹೆಚ್ಚಿನ ಇಳುವರಿ ಪಡೆಯಬಹುದು ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ. 2024-25ನೇ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಬೆಳೆ ಪರಿವರ್ತನೆಯಡಿ ಭತ್ತ (ಮುಂಗಾರು) ನಂತರ ಕಡಲೆ(ಹಿಂಗಾರು); ಅಂತರ ಬೆಳೆಯಾಗಿ ತೊಗರಿ(2 ಸಾಲು)+ಸಜ್ಜೆ (4 ಸಾಲು) ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಗಾರು ಹಂಗಾಮಿಗೆ ಗೋವಿನ ಜೋಳ+ತೊಗರಿ ಬೆಳೆಯನ್ನು (4:2) ಅಂತರ ಬೆಳೆಯಾಗಿ ತೊಗರಿ, ಅಲಸಂದೆ, ಹೆಸರು, ಉದ್ದು ಮುಂತಾದ ಬೆಳೆಗಳನ್ನು ಊದಲಿನೊಂದಿಗೆ 4:1 ಪ್ರಮಾಣದಲ್ಲಿ ಮಿಶ್ರ ಬೆಳೆಯಾಗಿ ಎರಡು ಸಾಲು ಹತ್ತಿ ಅಥವಾ ಎರಡು ಸಾಲು ತೊಗರಿಯನ್ನು ಒಂದು ಸಾಲು ರಾಜಗಿರಿ ಬೆಳೆ ಜೊತೆಗೆ ಅಂತರ ಬೆಳೆಯಾಗಿ ಬೆಳೆಯಬಹುದು. ಕಡಿಮೆ ಆಳದ ಕಪ್ಪು ಭೂಮಿಯಲ್ಲಿ ತೊಗರಿಯನ್ನು ನವಣೆಯೊಂದಿಗೆ 2:1 ಸಾಲುಗಳ ಅನುಪಾತದಲ್ಲಿ ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ (ನವಣೆಗೆ 45 ಸೆಂ.ಮೀ. ಸಾಲಿನ ಅಂತರ) ಆಳವಾದ ಕಪ್ಪು ಭೂಮಿಯಲ್ಲಿ ತೊಗರಿಯನ್ನು ಹೆಸರಿನೊಂದಿಗೆ 1:3 ಸಾಲುಗಳ ಅನುಪಾತದಲ್ಲಿ ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!