ಗದಗ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಕಡ್ಡಾಯವಾಗಿ ಜಾರಿಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ಬಳಿಕ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, 2006ರ ನಂತರ ನೇಮಕಗೊಂಡ ಸಿಬ್ಬಂದಿಗೆ ಓಪಿಎಸ್ ಜಾರಿಯಿಲ್ಲದ ಕಾರಣ, 60 ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗುವ ನೌಕರರಿಗೆ ವೃದ್ಧಾಪ್ಯದಲ್ಲಿ ನಿಶ್ಚಿತ ಪಿಂಚಣಿ ಸೌಲಭ್ಯ ದೊರೆಯದಿರುವುದು ಆಘಾತಕಾರಿ ಹಾಗೂ ಖೇದಕರ ಸಂಗತಿಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದು ಸಾಮಾನ್ಯ ಜನರ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿತ್ತು. ಆ ಭರವಸೆಯ ಮೇರೆಗೆ ನೌಕರರು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿ ಸರ್ಕಾರ ರಚನೆಗೆ ಕಾರಣರಾಗಿದ್ದಾರೆ. ಆದ್ದರಿಂದ ಸರ್ಕಾರ ತನ್ನ ಮಹತ್ವದ ಯೋಜನೆಗಳಲ್ಲಿ ಓಪಿಎಸ್ ಜಾರಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಕೂಡಲೇ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಹಲವಾರು ನೌಕರರ ಸಭೆ-ಸಮಾರಂಭಗಳಲ್ಲಿ ಮುಖ್ಯಮಂತ್ರಿ ಎಲ್ಲರಿಗೂ ನಿಶ್ಚಿತ ಪಿಂಚಣಿ ನೀಡುವುದು ಅನಿವಾರ್ಯ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಅವರು, ಸರ್ಕಾರದ ದಿಟ್ಟ ನಿರ್ಧಾರಗಳಿಂದ ಅನೇಕ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿರುವಂತೆ, ಲಕ್ಷಾಂತರ ನೌಕರರ ಬಹುದಿನಗಳ ಬೇಡಿಕೆಯಾಗಿರುವ ಓಪಿಎಸ್ ಯೋಜನೆಯನ್ನೂ ತಕ್ಷಣದಿಂದಲೇ ಜಾರಿಗೊಳಿಸಿ ನೌಕರರಿಗೆ ಆಸರೆಯಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್.ವಿ. ಸಂಕನೂರ, ಮೋಹನ ಲಿಂಬಿಕಾಯಿ, ರವಿ ಬಿ. ದಂಡಿನ, ಎ.ಎಸ್. ಪಾಟೀಲ (ಪ್ರಧಾನ ಕಾರ್ಯದರ್ಶಿ), ಬಿ.ಡಿ. ಯರಗೊಪ್ಪ, ಧನೇಶ ನಾಯಕ, ಡಿ.ಜಿ. ಪೂಜಾರ, ಮಂಜುನಾಥ ತೆಗ್ಗಿನಮನಿ, ಬಿ.ಸಿ. ಗುಳೇದ, ಟಿ.ಆರ್. ನಾಯಕ, ಪಿ.ಎನ್. ಹಿರೇಮಠ, ಶರಣು ಡಣಾಪೂರ, ಝಡ್.ಎಂ. ಖಾಜಿ, ಆರ್.ವಿ. ಗೊಂಡಬಾಳ, ಬೂದಪ್ಪ ಅಂಗಡಿ, ಬಿ.ಕೆ. ನಿಂಬನಗೌಡ್ರ, ಬಿ.ಎಚ್. ಕೊರ್ಲಹಳ್ಳಿ, ಹೆಚ್.ಟಿ. ಬಿಜ್ಜೂರ, ಎಲ್.ಎಸ್. ಅರಳಹಳ್ಳಿ, ಗಿರೀಶ ಸುಗಜನಾವರ, ಮಹೇಶ ಕೇರಿ, ಆರ್.ಎಚ್. ನರೇಗಲ್ಲ, ಸುನೀಲ ಲಮಾಣಿ, ಡಿ.ಎನ್. ಮರಡ್ಡಿ ಉಪಸ್ಥಿತರಿದ್ದರು.
“2006ರ ನಂತರ ನೇಮಕಗೊಂಡ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು. ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಬೇಕು.”
– ಎಂ.ಕೆ. ಲಮಾಣಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ



