ವಿಜಯಸಾಕ್ಷಿ ಸುದ್ದಿ, ಗದಗ: ಈ ಹಿಂದೆ ಇದ್ದ ಮನರೇಗಾ ಯೋಜನೆಯ ಲೋಪ-ದೋಷ ಸರಿಪಡಿಸಿ ರೈತರಿಗೆ, ಕೃಷಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಜಿ.ರಾಮ್ ಜಿ ಕಾಯ್ದೆ ಜಾರಿಗೊಳಿಸಿದ್ದು ಸ್ವಾಗತಾರ್ಹ ಎಂದು ಮಾಜಿ ಸಚಿವ, ಹಾಲಿ ಶಾಸಕ ಸಿ.ಸಿ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಮನರೇಗಾ ಯೋಜನೆಯ ಹಣ ವಿಳಂಬವಾಗುತ್ತಿತ್ತು. ಕಾಯ್ದೆ ತಿದ್ದುಪಡಿ ಆದ ನಂತರ ವಿಳಂಬವಾಗುವುದಿಲ್ಲ. ಸಿದ್ದರಾಮಯ್ಯ ಈ ಕಾಯ್ದೆಯನ್ನು ವಿರೋಧ ಮಾಡುತ್ತಾರೆ. ತಮ್ಮ ಸರ್ಕಾರದ ಹುಳುಕು ಹೊರಬರುತ್ತದೆ ಎನ್ನುವ ಭಯ ಅವರಲ್ಲಿ ಕಾಡುತ್ತಿದೆ. ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದು, ರಾಜ್ಯಸಭೆಯಲ್ಲಿಯೂ ಮಂಡಿಸಿ ಅನುಮೋದನೆ ಪಡೆದು ತಿದ್ದುಪಡಿ ಮಾಡಲಾಗಿದೆ ಎಂದರು.
ಭಾರತೀಯ ಜನತಾ ಪಕ್ಷದ ವತಿಯಿಂದ ಜಿಲ್ಲಾ ಸಮ್ಮೇಳನ, ತಾಲೂಕು, ಗ್ರಾಮ ಮಟ್ಟದ ಸಭೆ ನಡೆಸಿ ಜಿ.ರಾಮ್ ಜಿ ಕಾಯ್ದೆ ಕುರಿತು ಜನರಿಗೆ ಹಾಗೂ ಕೃಷಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮನರೇಗಾ ಯೋಜನೆಯ ಲೋಪದೋಷ ಗುರುತಿಸಿ ವಿಕಸಿತ ಭಾರತ ಕಾಯ್ದೆ ಜಾರಿಗೆ ತರಲಾಗಿದೆ. ಮನರೇಗಾದಿಂದ ಭ್ರಷ್ಟಾಚಾರ ಮಾಡಲು ಅನುಕೂಲವಾಗುತ್ತಿತ್ತು. ರೈತರು ಬಿತ್ತನೆ ಮಾಡುವ ಸಮಯದಲ್ಲಿ ಮನರೇಗಾ ಕಾರ್ಯ ಆರಂಭವಾಗುತ್ತಿತ್ತು. ನೂತನ ಕಾಯ್ದೆಯಿಂದ 60 ದಿನಗಳ ಕಾಲ ಕಡ್ಡಾಯವಾಗಿ ರಜೆ ನೀಡಬೇಕು ಎಂದು ವಿವರಿಸಿದರು.
1980ರಲ್ಲಿ ಎನ್ಆರ್ಇಜಿ ಎಂದು ಈ ಯೋಜನೆಯ ಹೆಸರಿತ್ತು. ನಂತರ ಮನರೇಗಾ ಎಂದು ಹೆಸರು ಬದಲಾಯಿಸಲಾಯಿತು. ಕಾಂಗ್ರೆಸ್ ತಪ್ಪು ಸಂದೇಶವನ್ನು ನೀಡುತ್ತಿದೆ. ಗಾಂಧಿಜಿಯವರ ರಾಮರಾಜ್ಯ ಕನಸು ನನಸು ಮಾಡಲು ನರೇಂದ್ರ ಮೋದಿ ಹೆಸರು ಬದಲಾವಣೆ ಮಾಡಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಗದಗ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ನಿರ್ಮಲಾ ಕೊಳ್ಳಿ, ಎಂ.ಎ. ಹಿರೇಮಠ, ಎಂ.ಎಸ್. ಕರಿಗೌಡ್ರ, ರವಿ ದಂಡಿನ್, ಲಿಂಗರಾಜಗೌಡ ಪಾಟೀಲ, ದತ್ತಣ್ಣ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ಮೊಟಕುಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ಶುದ್ಧ ಸುಳ್ಳು. ನೀರಿನ ಸುರಕ್ಷತೆ ಕಾಮಗಾರಿ, ಗ್ರಾಮೀಣ ಮೂಲ ಸೌಕರ್ಯ ರೂಪಿಸುವುದು, ಜೀವನೋಪಾಯಕ್ಕೆ ಬೇಕಾಗಿರುವ ವ್ಯವಸ್ಥೆ ಕಲ್ಪಿಸುವುದು, ಹವಾಮಾನ ವೈಪರಿತ್ಯದಿಂದ ಆಗುವ ಅನಾಹುತ ಸರಿಪಡಿಸುವುದನ್ನು ನೂತನ ಕಾಯ್ದೆಯಲ್ಲಿ ಜಾರಿಗೆ ತರಲಾಗಿದೆ”
-
ಎಸ್.ವಿ. ಸಂಕನೂರು.
ವಿ.ಪ ಸದಸ್ಯರು.



