ವಿಜಯಸಾಕ್ಷಿ ಸುದ್ದಿ, ನರಗುಂದ : ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟಗಾರರು ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದ ಮೇರೆಗೆ ರೈತರ ಮೇಲೆ ದಾಖಲಾಗಿದ್ದ ಪ್ರಕರಣ 8 ವರ್ಷದ ವಿಚಾರಣೆ ಬಳಿಕ ಅಂತ್ಯಗೊಂಡಿದೆ. ರೈತ ಹೋರಾಟಗಾರರು ನಿರಪರಾಧಿಗಳೆಂದು ನ್ಯಾಯಾಲಯ ತೀರ್ಪು ಹೊರಡಿಸಿದೆ.
ಬುಧವಾರ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಈ ಪ್ರಕರಣದ ಕುರಿತು ಅಂತಿಮ ಆದೇಶ ನೀಡಿದ್ದು, ಆರೋಪಿಗಳೆಲ್ಲರೂ ಸಾರ್ವಜನಿಕ ಹೋರಾಟಗಾರರು ಎಂದು ನ್ಯಾಯಾಧೀಶ ಜೀನಪ್ಪ ಚೌಗಲಾ ಅವರಿದ್ದ ಪೀಠ ತೀರ್ಪು ನೀಡಿತು.
2017ರಲ್ಲಿ ಕಳಸಾ ಬಂಡೂರಿ, ಮಹದಾಯಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ರೈತರ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸದೆ ಇದ್ದಾಗ, ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶದ ರೈತರು ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಎ.ಪಿ. ಪಾಟೀಲ ಅವರ ಗೋದಾಮಿನಲ್ಲಿ ಸಭೆ ಸೇರಿದ್ದರು.
ಹುಬ್ಬಳ್ಳಿಯಲ್ಲಿ ರೈಲು ತಡೆ ನಡೆಸಿ, ಸರಕಾರದ ಗಮನ ಸೆಳೆಯಲು ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ವೇಳೆ ಪೊಲೀಸ್ ಗುಪ್ತಚರ ವಿಭಾಗದ ಪೇದೆ ಬಾಪುಗೌಡ ಪಾಟೀಲ ಅವರು ಸಭೆ ನಡೆಯುತ್ತಿದ್ದ ಗೋದಾಮಿಗೆ ಪ್ರವೇಶಿಸಲು ಮುಂದಾದಾಗ ರೈತರು ಮತ್ತು ಪೇದೆ ಮಧ್ಯೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ಕಾರಣವಾಗಿತ್ತು.
ಘಟನೆಯಲ್ಲಿ ಪೇದೆ ಬಾಪುಗೌಡ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹಿನ್ನೆಲೆಯಲ್ಲಿ ರೈತ ಹೋರಾಟಗಾರರಾದ ಲೋಕನಾಥ ಹೆಬಸೂರ, ಶಂಕರಪ್ಪ ಅಂಬಲಿ, ಹರೀಶ ಕಾಲವಾಡ, ಸಂತೋಷ ವಡ್ಡರ, ಪರಶುರಾಮ ಜಂಬಗಿ, ವೀರಬಸಪ್ಪ ಹೂಗಾರ, ಬಸವರಾಜ ಸಾಬಳೆ, ಕಾಡಪ್ಪ ಕಾಕನೂರ, ವಿಠ್ಠಲ ಜಾಧವ, ಜೀನಪ್ಪ ಮುತ್ತಿನ, ದಿ. ಎ.ಪಿ. ಪಾಟೀಲ ಸೇರಿ ಒಟ್ಟು 12 ಜನ ರೈತ ಮುಖಂಡರ ಮೇಲೆ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸದರಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ರೈತ ಹೋರಾಟಗಾರರನ್ನು ನಿರಪರಾಧಿಗಳು ಎಂದು ಬಿಡುಗಡೆಗೊಳಿಸಿತು. ರೈತ ಹೋರಾಟಗಾರರ ಪರವಾಗಿ ಎಂ.ಬಿ. ಕುಲಕರ್ಣಿ, ವಿ.ಎ. ಮೂಲಿಮನಿ ವಾದ ಮಂಡಿಸಿದ್ದರು.
ನ್ಯಾಯಾಲಯದ ತೀರ್ಪಿನ ಕುರಿತು ಕರ್ನಾಟಕ ರೈತಸೇನೆಯ ರಾಜ್ಯಾಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ರೈತರ ಮೇಲಿರುವ ಎಲ್ಲ ಕೇಸ್ ಹಿಂಪಡೆದುಕೊಳ್ಳುವಂತೆ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಯಾವುದೇ ಸ್ಪಂದನೆ ದೊರೆತಿರಲಿಲ್ಲ. ಈಗ ನ್ಯಾಯಾಲಯ 12 ರೈತರಿಗೆ ನಿರಪರಾಧಿಗಳು ಎಂಬ ತೀರ್ಪು ನೀಡಿರುವುದು ಖುಷಿ ತರಿಸಿದೆ ಎಂದರು.