ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಾತಿ ಗಣತಿ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಜಾತಿಗಳನ್ನು ಒಡೆಯುವ ಉದ್ದೇಶದಿಂದ ಪೂರ್ವಸಿದ್ಧತೆಯಿಲ್ಲದ ಗಣತಿಗೆ ತರಾತುರಿಯಲ್ಲಿ ಕೈ ಹಾಕಿದೆ ಎಂದು ಚನ್ನು ಪಾಟೀಲ ಫೌಂಡೇಷನ್‌ನ ಸಂಸ್ಥಾಪಕ ಉಮೇಶ್ ಪಾಟೀಲ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪೂರ್ವಸಿದ್ಧತೆಯಿಲ್ಲದೆ ನಡೆಸಿರುವ ಈ ಗಣತಿ ದುಂದು ವೆಚ್ಚಕ್ಕೆ ಕಾರಣವಾಗಿದೆ. ಅಧಿಕಾರವಿಲ್ಲದಿದ್ದರೂ ರಾಜ್ಯ ಸರ್ಕಾರ ಜಾತಿ ಗಣತಿ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯಾದ್ಯಂತ ಸರ್ವರ್ ಸಮಸ್ಯೆ, ಜಾತಿ ಗಣತಿ ಅರ್ಜಿ ಡೌನ್‌ಲೋಡ್ ಆಗದಿರುವುದು, ಯುಎಚ್‌ಐಡಿ ನಂಬರ್‌ಗಳಲ್ಲಿ ಸಮಸ್ಯೆ ತಲೆದೋರಿರುವುದು, ಮನೆಗಳ ಲೊಕೇಶನ್ ತಪ್ಪಾಗಿ ತೋರಿಸುತ್ತಿರುವುದು ಇಂತಹ ನೂರಾರು ಸಮಸ್ಯೆಗಳನ್ನು ಇಟ್ಟುಕೊಂಡು ಗಣತಿದಾರರು ಹೈರಾಣಾಗಿದ್ದಾರೆ.
ರಾಜ್ಯಾದ್ಯಂತ ದಿನಕ್ಕೆ 10 ಲಕ್ಷ ಮನೆಗಳನ್ನು ಗಣತಿ ಮಾಡಬೇಕೆಂದು ಗುರಿ ಇಟ್ಟುಕೊಂಡಿರುವ ಸರ್ಕಾರಕ್ಕೆ ಈ ಎಲ್ಲ ತೊಂದರೆಗಳಿಂದ ಸರಿಯಾಗಿ ಒಂದು ಲಕ್ಷ ಮನೆಗಳನ್ನೂ ಗಣತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನೂ ನೋಡಿದರೆ ಸರ್ಕಾರದ ಆಡಳಿತ ಯಂತ್ರ ಕುಸಿದು ಬಿದ್ದಿರುವುದು ಸ್ಪಷ್ಟವಾಗುತ್ತದೆ ಎಂದು ಉಮೇಶ್ ಪಾಟೀಲ ತಿಳಿಸಿದ್ದಾರೆ.



