ವಿಜಯಸಾಕ್ಷಿ ಸುದ್ದಿ, ಗದಗ : ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಮ್ಬಿಬಿಎಸ್ ವಿದ್ಯಾರ್ಥಿಗಳಿಗೆ ಡಾಕ್ಟರ್ ಪದವಿ ಪ್ರದಾನ (Graduation Day) ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
2018ರಲ್ಲಿ ಜಿಮ್ಸ್ ಕಾಲೇಜಿಗೆ ಪ್ರವೇಶ ಪಡೆದು, ಐದುವರೆ ವರ್ಷಗಳ ಕಾಲ ಅಧ್ಯಯನ ಮಾಡಿ ಕೋರ್ಸನ್ನು ಮುಗಿಸಿದ ಉನ್ನತ ಬ್ಯಾಚಿನ ವಿದ್ಯಾರ್ಥಿಗಳಿಗೆ ಡಾಕ್ಟರ್ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಪದ್ಮಶ್ರೀ ಪುರಸ್ಕೃತ ಹೆಸರಾಂತ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಹಾಗೂ ಡಿ.ಡಿ ಚಂದನ ವಾಹಿನಿಯ `ಥಟ್ ಅಂತ ಹೇಳಿ’ ಕ್ವಿಜ್ ಖ್ಯಾತಿಯ ಡಾ. ನಾ ಸೋಮೇಶ್ವರ ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ಸಿ.ಆರ್. ಚಂದ್ರಶೇಖರ, ಭಾರತೀಯ ವೈದ್ಯರು ಪ್ರಪಂಚದಲ್ಲಿಯೇ ಶ್ರೇಷ್ಠ ವೈದ್ಯರೆಂದು ಹೆಸರು ಪಡೆದಿದ್ದಾರೆ. ಒಬ್ಬ ಶ್ರೇಷ್ಠ ವೈದ್ಯನಾಗಲು ರೋಗಿಗಳ ಜೊತೆ ಆಡು ಭಾಷೆಯಲ್ಲಿ ಮಾತನಾಡಬೇಕು. ಭಾವನೆಗಳನ್ನು ಹಾಗೂ ತೊಂದರೆಗಳನನ್ನು ಅರಿತುಕೊಳ್ಳಬೇಕು.ಚಿಕಿತ್ಸೆಯ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ಡಾ. ನಾ.ಸೋಮೇಶ್ವರ ಮಾತನಾಡಿ, `ಅವಿನೀರ್’ ಎಂಬ ಶಿರ್ಷಿಕೆಗೆ ತಕ್ಕಂತೆ, ನೂತನ ವೈದ್ಯರು ಮುಂದಿನ ಭಾರತದ ಭವಿಷ್ಯ ಹಾಗೂ ಎಲ್ಲ ವೈದ್ಯರು ಉನ್ನತ ವ್ಯಾಸಂಗ ಮಾಡಿ ಉನ್ನತ ವೈದ್ಯರಾಗಿರಿ ಎಂದು ಹಾರೈಸಿದರು.
ಜಿಮ್ಸ್ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಪಿ ಬೊಮ್ಮನಹಳ್ಳಿ ನೂತನ ವೈದ್ಯರನ್ನು ಅಭಿನಂದಿಸಿ, ಹೆಸರಾಂತ ಮುಖ್ಯ ಅಥಿತಿಗಳ ಕೈಯಲ್ಲಿ ಪದವಿ ಪಡೆದುಕೊಳ್ಳುತ್ತಿರುವುದು ನಮ್ಮ ವಿದ್ಯಾರ್ಥಿಗಳ ಅದೃಷ್ಟ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಡಾ. ಸಮತಾ, ಡಾ. ಪ್ರಮೋದ ಹಾಗೂ ಡಾ. ಶಂಭು ನಡೆಸಿ ಕೊಟ್ಟರು. ಡಾ. ಈಶ್ವರ್ ಸಿಂಗ್.ಆರ್ `ಹಿಪೋಕ್ರೆಟಿಸ್’ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಡಾ. ಮಹಾಂತೇಶ ಪಾಟೀಲ ವಂದಿಸಿದರು. ಸಮಾರಂಭದಲ್ಲಿ ಎಲ್ಲ ವೈದ್ಯಕೀಯ ವೃಂದ ಹಾಗೂ ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿದ್ದರು.