ತುಮಕೂರು:- ಕುಡಿದ ಮತ್ತಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆ ಗೃಹರಕ್ಷಕ ದಳ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.
ತುಮಕೂರಿನ ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ಆರ್.ರಾಜೇಂದ್ರನ್ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದೆ. ಡೆಪ್ಯೂಟಿ ಕಮಾಂಡೆಂಟ್ ರಾಜೇಂದ್ರನ್ ಗೃಹರಕ್ಷಕಿಯರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಹೇಗೆ ನಮ್ಮ ರಕ್ಷಣೆ ಮಾಡ್ತಾರೋ ಅದೇ ರೀತಿ ಗೃಹರಕ್ಷಕ ಇಲಾಖೆ ಕೂಡ ಸಾರ್ವಜನಿಕರ ರಕ್ಷಣೆಯ ಕೆಲಸ ಮಾಡುತ್ತದೆ. ಹೀಗಾಗಿ ಗೃಹರಕ್ಷಕ ದಳದ ಸಿಬ್ಬಂದಿಯ ಮೇಲೂ ಸಾರ್ವಜನಿಕರಿಗೆ ಅಷ್ಟೇ ಗೌರವ ಇದೆ. ಆದ್ರೆ ಈ ಇಲಾಖೆಯ ಪ್ರಮುಖ ಹುದ್ದೆಯಲ್ಲಿರೋ ಅಧಿಕಾರಿಯ ವಿರುದ್ಧವೇ ಇದೀಗ ಗಂಭೀರ ಆರೋಪ ಕೇಳಿಬಂದಿದೆ.
ಟ್ರೈನಿಂಗ್ ಕ್ಯಾಂಪ್ ವೇಳೆ ಎಣ್ಣೆ ಏಟಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನೊಂದ ಗೃಹರಕ್ಷಕಿಯರು ಈಗಾಗಲೇ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಮಹಿಳಾ ಆಯೋಗ, ತುಮಕೂರು ಜಿಲ್ಲಾಧಿಕಾರಿ, ತುಮಕೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ತನಿಖೆ ಮುಂದುವರಿದಿದೆ.