ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ವೈಚಾರಿಕತೆ ಮತ್ತು ಸುಧಾರಣೆಯ ಹೆಸರಿನಲ್ಲಿ ಆಧ್ಯಾತ್ಮ ಸಂಸ್ಕೃತಿ ನಾಶಗೊಳ್ಳಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಸಂಯೋಜಿಸಿದ್ದ ಧರ್ಮೋತ್ತೇಜಕ ಸಂಗಮ ಸಮಾವೇಶದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವನನ್ನು ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ಗುರುವಿನ ಧರ್ಮವಾಗಿದೆ. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳನ್ನು ಬೋಧಿಸುವುದರ ಮೂಲಕ ಸಾಮರಸ್ಯ ಸೌಹಾರ್ದತೆ ಬೆಳೆಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಗುರುವಿಲ್ಲದೇ ಅರಿವು ಆದರ್ಶಗಳು ತೋರವು. ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಶಿವ ಪಥವನರಿಯಲು ಗುರುವೇ ಕಾರಣೀಭೂತನಾಗಿದ್ದಾನೆ. ಧಾರ್ಮಿಕ ತತ್ವ ಸಿದ್ಧಾಂತಗಳ ಪರಿಪಾಲನೆಯಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತವಾಗುವುದೆಂದರು.
ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯನಲ್ಲಿ ಆಶೆಗಳು ಹೆಚ್ಚಾಗಿವೆ. ಆದರೆ ಆದರ್ಶ ಚಿಂತನೆಗಳ ಕೊರತೆಯಿದೆ. ಹೀಗಾಗಿ ಜೀವನದಲ್ಲಿ ಶಾಂತಿ ಸಮಾಧಾನವಿಲ್ಲ. ಆರೋಗ್ಯಪೂರ್ಣ ಸಮಾಜಕ್ಕೆ ಇಂಥ ಸಮಾರಂಭಗಳ ಅವಶ್ಯಕತೆ ಇದೆ ಎಂದರು.
ಡಾ. ಮಮತಾ ಸಾಲಿಮಠ ಅವರು ಸಿದ್ಧಾಂತ ಶಿಖಾಮಣಿಯಲ್ಲಿ ಗುರು ಹಿರಿಮೆ ವಿಷಯವಾಗಿ ಉಪನ್ಯಾಸ ನೀಡುತ್ತ ಮನುಷ್ಯ ಜೀವನದಲ್ಲಿ ಗುರಿ ಮತ್ತು ಗುರುವನ್ನು ಆಶ್ರಯಿಸಿ ಆದರ್ಶ ಬದುಕು ಕಟ್ಟಿಕೊಳ್ಳಬೇಕು.
ಭಾರತೀಯ ಆಧ್ಯಾತ್ಮ ಸಂಪತ್ತು ಬೆಟ್ಟದಷ್ಟಿದೆ. ಪೂರ್ವದ ಋಷಿ ಮುನಿಗಳು ಆಚಾರ್ಯರು ಹಾಗೂ ಸಜ್ಜನರು ಕೊಟ್ಟು ಹೋದ ಸಂದೇಶ ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ. ಒತ್ತಡಗಳಿಂದ ಜರ್ಜರಿತವಾದ ಮನುಷ್ಯನ ಮನಸ್ಸಿಗೆ ಒಂದಿಷ್ಟಾದರೂ ಶಿವಜ್ಞಾನದ ಚಿಂತನೆ ಮತ್ತು ಪರಿಪಾಲನೆ ಅವಶ್ಯಕವೆಂದರು. ನಿವೃತ್ತ ಐಪಿಎಸ್ ಅಧಿಕಾರಿ ರೇವಣಸಿದ್ಧಯ್ಯ, ನ್ಯಾಯವಾದಿ ಚಂದ್ರಮೌಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ಬೀರೂರು ಶಿವಸ್ವಾಮಿ, ಮಾದೇವಯ್ಯ, ಉಮಾಶಂಕರ, ಚಂದ್ರಶೇಖರ ನಾಗರಾಳಮಠ, ಸಂಗಯ್ಯ ಹಿರೇಮಠರು ಉಪಸ್ಥಿತರಿದ್ದರು.
ನ್ಯಾಯವಾದಿ ಆರ್.ಆರ್. ಹಿರೇಮಠ ಸ್ವಾಗತಿಸಿದರು. ಲಾವಣ್ಯ ಮಂಜುನಾಥ ನಿರೂಪಿಸಿದರು. ಲತಾ ಜಿಗಳೂರು, ಪಂಚಾಕ್ಷರಿ ಹಿರೇಮಠ, ಪಿ.ಎಸ್. ವಿಶ್ವನಾಥ, ನ್ಯಾಯವಾದಿ ಬಿ.ಪಿ. ಪುಟ್ಟಸಿದ್ಧಯ್ಯ ಅನ್ನ ದಾಸೋಹ ಸೇವೆ ಸಲ್ಲಿಸಿದರು. ವೇ.ಶಿವಶಂಕರ ಶಾಸ್ತಿç ಮತ್ತು ಗಾನಸುಧೆ ತಂಡದವರು ಭಕ್ತಿಗೀತೆ ಪ್ರಸ್ತುತಪಡಿಸಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿ ಬದುಕಿನಲ್ಲಿ ಶಾಂತಿ ನೆಮ್ಮದಿಗಿಂತ ಮಿಗಿಲಾದ ಸಂಪತ್ತಿಲ್ಲ. ಧರ್ಮದ ಪಾಲನೆಯಿಂದ ಇವು ದೊರಕುತ್ತವೆ ಹೊರತು ಹಣದಿಂದಲ್ಲ. ಶ್ರೀ ರಂಭಾಪುರಿ ಪೀಠದ ಆದರ್ಶ ಚಿಂತನೆಗಳು ಭಕ್ತ ಸಂಕುಲದ ಉನ್ನತಿಗೆ ಸ್ಫೂರ್ತಿಯಾಗಿವೆ ಎಂದರು. ಆಧ್ಯಾತ್ಮ ಚಿಂತಕ ವಿನಯ ಗುರೂಜಿ ಮಾತನಾಡಿ ಆಧ್ಯಾತ್ಮ ಲೋಕದ ಚಿತ್ಸೂರ್ಯ ಶ್ರೀ ಗುರು. ಧರ್ಮ ಸಂಸ್ಕೃತಿ ಜೀವನದ ಶ್ರೇಯಸ್ಸಿಗೆ ಮೂಲ. ಅಜ್ಞಾನ ಹೊರ ಸರಿಸಿ ಶಿವಜ್ಞಾನದ ಬೆಳಕು ಪಡೆಯಲು ಗುರುವನ್ನು ಆಶ್ರಯಿಸಬೇಕೆಂದರು.
Advertisement