ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಇಂದು ಎಲ್ಲ ರಂಗಗಳಲ್ಲಿಯೂ ಸ್ಪರ್ಧೆ ಅನಿವಾರ್ಯವಾಗಿದೆ. ಸತತ ಅಧ್ಯಯನಶೀಲರಾದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಸದಾ ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.
ಪಟ್ಟಣದ ಕ.ರಾ.ಬೆಲ್ಲದ ಮಹಾವಿದ್ಯಾಲಯದಲ್ಲಿ ಅವ್ವ ಸಮಾಜ ಸೇವಾ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅವ್ವ ಸಮಾಜಸೇವಾ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ, ಸಾಧಕ ತಾಯಂದಿರ ಸನ್ಮಾನ ಕಾರ್ಯಕ್ರಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರುತ್ತದೆ. ಅದನ್ನು ಬದಿಗೊತ್ತಿ ದೈರ್ಯದಿಂದ ಅಧ್ಯಯನದಲ್ಲಿ ತೊಡಗಬೇಕು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಸಿದ್ಧತೆ ಕುರಿತಂತೆ ಹಲವಾರು ಸೌಲಭ್ಯಗಳಿದ್ದು, ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಮಾತನಾಡಿ, ಮುರಡಿ ಕುಟುಂಬ ವರ್ಗದವರು ತಮ್ಮ ತಾಯಿ ಲಿಂ.ಬಸಮ್ಮನವರ ನೆನಪಿನಲ್ಲಿ ಅವ್ವ ಸಮಾಜ ಸೇವಾ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಕಾರ್ಯಕ್ಕೆ ಮುಂದಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಪ್ರತಿಷ್ಠಾನದ ವತಿಯಿಂದ ಸದಾ ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಜಗತ್ತಿನಲ್ಲಿ ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ತಂದೆ, ತಾಯಿಗೆ ಉತ್ತಮ ಮಕ್ಕಳಾಗಿ, ನಾಡಿಗೆ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಮುರಡಿ ಮಾತನಾಡಿ, ಈ ಪ್ರತಿಷ್ಠಾನ ಮೂಲಕ ಸಮಾಜಕ್ಕೆ ನಮ್ಮ ಕೈಲಾದ ಮಟ್ಟಿಗೆ ಸೇವೆಯನ್ನು ಸಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಮುನ್ನಡೆಯಲಿದ್ದೇವೆ. ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರತಿಷ್ಠಾನದ ವತಿಯಿಂದ ಪಟ್ಟಣದ ಜಯಶ್ರೀ ಅಳವಂಡಿ ಹಾಗೂ ಪಾರ್ವತಿ ಕಾಗನೂರಮಠ ಅವರಿಗೆ ‘ತ್ಯಾಗಮಯಿ ಸಾಧಕ ತಾಯಿ’ ಎಂದು ಗೌರವಿಸಿ ಸನ್ಮಾನಿಸಲಾಯಿತು. ಖುಷಿ ಮುರಡಿ ಭರತನಾಟ್ಯ ಸಾದರ ಪಡಿಸಿದರು.
ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ನಾಗರಾಜ ಹಳ್ಳಿಕೇರಿ, ಕಾಲೇಜು ಮೇಲ್ವಿಚಾರಣಾ ಸಮಿತಿ ಉಪ ಕಾಯಾಧ್ಯಕ್ಷ ವಿ.ಎಫ್. ಗುಡದಪ್ಪನವರ, ಪ್ರಾಚಾರ್ಯ ಡಾ. ಡಿ.ಸಿ. ಮಠ, ಉಪನ್ಯಾಸಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಾಯಕಿ ನಯನಾ ಅಳವಂಡಿ ಪ್ರಾರ್ಥಿಸಿದರು. ಪತ್ರಕರ್ತ ಸಂತೋಷ ಮುರಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ.ಸಂತೋಷ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಜಗತ್ತಿನಲ್ಲಿರುವ ಎಲ್ಲ ಮಹಾತ್ಮರು, ಸ್ವಾಮೀಜಿಗಳು, ರಾಜಕಾರಣಿಗಳು, ಶ್ರೀಮಂತರು ತಾಯಿಯ ಗರ್ಭದಿಂದಲೇ ಜನಿಸಿರುತ್ತಾರೆ. ತಾಯಿ, ತಂದೆಯನ್ನು ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು. ಮಕ್ಕಳು ತಂದೆ-ತಾಯಿಗಳನ್ನು ಪ್ರೀತಿ, ಗೌರವದಿಂದ ಕಾಣಬೇಕು ಎಂದು ತಿಳಿಸಿದರು.