ವಿಜಯಸಾಕ್ಷಿ ಸುದ್ದಿ, ಗದಗ : ಭವಿಷ್ಯತ್ತಿನ ಸುಂದರ ಬದುಕಿಗೆ ಇಂದಿನ ಪರಿಶ್ರಮ ಅತಿ ಮುಖ್ಯ. ಭವಿಷ್ಯತ್ತಿನ ಪ್ರಗತಿಯನ್ನು ಹುಡುಕುವ ಜವಾಬ್ದಾರಿ ನಿಮ್ಮಲ್ಲಿ ಬರಬೇಕು. ಒಬ್ಬ ವ್ಯಕ್ತಿ ಶಕ್ತಿಯಾಗಿ ಹೊರ ಹೊಮ್ಮುವದು ಅತಿ ಮುಖ್ಯ. ನಮ್ಮ ವ್ಯಕ್ತಿತ್ವವನ್ನು ನಾವು ರೂಪಿಸಿಕೊಳ್ಳಬೇಕೆಂದರೆ ಅದಕ್ಕೆ ಶಿಸ್ತು, ಪರಿಶ್ರಮ, ಭಕ್ತಿ-ಭಾವಗಳು, ರೀತಿ-ನೀತಿಗಳು ಕಾರಣವಾಗುತ್ತವೆ ಎಂದು ಡಾ. ಕಲ್ಲೇಶ ಮೂರಶಿಳ್ಳಿನ ಅಭಿಪ್ರಾಯಪಟ್ಟರು.
ಜಗದ್ಗುರು ಶಿವಾನಂದ ಪ.ಪೂ ಕಾಲೇಜಿನಲ್ಲಿ ಜರುಗಿದ ಪಠ್ಯ, ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ. ಜಿ.ಬಿ. ಪಾಟೀಲ ವಿದ್ಯಾರ್ಥಿಗಳಿಗೆ ಆದರ್ಶ ತತ್ವಗಳನ್ನು ರೂಢಿಸಿಕೊಳ್ಳಲು ತಿಳಿಸಿ, ಪದವಿಪೂರ್ವ ಶಿಕ್ಷಣ ಬದುಕಿನಲ್ಲಿ ಒಂದು ಮಹತ್ತರವಾದ ಘಟ್ಟ. ನೀವು ಸರಿಯಾಗಿ ಜ್ಞಾನಾರ್ಜನೆಯನ್ನು ರೂಢಿಸಿಕೊಂಡು ಹೋದರೆ ಮುಂದಿನ ಮುಕ್ಕಾಲು ಭಾಗ ಜೀವನ ಸಂತೋಷವಾಗಿರುತ್ತದೆ ಎಂದರು.
ಪ್ರಾಚಾರ್ಯ ಎಸ್.ವ್ಹಿ. ವೆರ್ಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ವಿನಿ ಸಂಗಡಿಗರು ಪ್ರಾರ್ಥಿಸಿದರು. ಹಿರಿಯ ಉಪನ್ಯಾಸಕ ಎಂ.ಪಿ. ಮಂಟೂರ ಸ್ವಾಗತಿಸಿದರು. ಕೃಷ್ಣಪ್ರಸಾದ ಜಾಧವ ಸಂಸತ್ತಿನ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದಿಸಿದರು. 2024ರ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶ್ರೇಯಾ ಕಬಾಡಿ, ಸೃಷ್ಟಿ ಜಕ್ಕಲಿ, ಕಾವ್ಯಾ ಓದಿಸುಮಠ ಅವರಿಗೆ ಕಾಲೇಜು ವತಿಯಿಂದ ನಗದು ಬಹುಮಾನ ನೀಡಲಾಯಿತು.
ಉಪನ್ಯಾಸಕರಾದ ಎಂ.ಪಿ. ಮಂಟೂರ ಹಾಗೂ ಕೃಷ್ಣಪ್ರಸಾದ ಜಾಧವ ಇವರು ಸಾಧಕ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂಗಳ ವಿಶೇಷ ನಗದು ಬಹುಮಾನ ನೀಡಿದರು. ಎಸ್.ಬಿ. ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ದೀಪಾ ಮಂಡರಗಿ ಕಾರ್ಯಕ್ರಮ ನಿರೂಪಿಸಿದರು. ಭಾವನಾ ಅಂಗಡಿ ವಂದಿಸಿದರು.