ವಿಜಯಸಾಕ್ಷಿ ಸುದ್ದಿ, ಡಂಬಳ: ಯುವಕರು ಕುಸ್ತಿಯಲ್ಲಿ ಹಿಂದೇಟು ಹಾಕುವ ಕಾಲದಲ್ಲಿ ಗ್ರಾಮಸ್ಥರು ಕೂಡಿಕೊಂಡು ಜಾತ್ರಾ ಮಹೋತ್ಸವದಲ್ಲಿ ಕುಸ್ತಿಯನ್ನು ಆಯೋಜಿಸುವ ಮೂಲಕ ಯುವಕರು ಉತ್ತಮ ಆರೋಗ್ಯವಂತರಾಗಬೇಕು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಸದುದ್ದೇಶ ಹೊಂದಿರುವುದು ಪ್ರಶಂಸನೀಯ ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಾಹಾಸ್ವಾಮೀಜಿ ಹೇಳಿದರು.
ಡಂಬಳ ಗ್ರಾಮದಲ್ಲಿ ಶ್ರೀ ತೋಂಟದಾರ್ಯ ಮದರ್ಧನಾರೀಶ್ವರ ಜಾತ್ರಾಮಹೋತ್ಸವ ಮತ್ತು ಜಮಾಲಶಾವಲಿ ಶರಣ ಉರುಸ್ ಅಂಗವಾಗಿ ಡಂಬಳ ಗ್ರಾಮದ ಗರಡಿಮನೆ ಉದ್ಘಾಟನಾ ಕಾರ್ಯಕ್ರಮ ಮತ್ತು ತೋಂಟದಾರ್ಯ ಕಲಾಭವನದ ಆವರಣದಲ್ಲಿ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಭಾರೀ ಜಂಗಿ ನಿಖಾಲಿ ಕುಸ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು.
ಅನೇಕ ಯುವಕರು ಇತ್ತೀಚೆಗೆ ದುರ್ವ್ಯಸನಕ್ಕೆ ಒಳಗಾಗುವುದರ ಮೂಲಕ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದು, ಕುಟುಂಬಗಳು ಬೀದಿಪಾಲಾಗುವುದು ಮತ್ತು ಆರ್ಥಿಕವಾಗಿ ಹಾಳಾಗುತ್ತಿವೆ. ಈ ಕುರಿತು ಕುಟುಂಬದ ಪಾಲಕರು ಯುವಕರತ್ತ ಹೆಚ್ಚು ಗಮನಹರಿಸಬೇಕು. ಡಂಬಳ ಗ್ರಾಮದಲ್ಲಿ ಕುಸ್ತಿ ಕಲಿಸಲು ಬೇಕಾಗುವ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಸುಸಜ್ಜಿತ ಗರಡಿಮನೆಗಳು ಇವೆ ಅದರ ಸದ್ಬಳಕೆಯಾಗಬೇಕು ಎಂದು ಹೇಳಿದರು.
ಬೆಳಗಟ್ಟಿಯ ಹಜರತ್ ಮಹೆಬೂಬಶಾ ಖಾದ್ರಿ ಸಜ್ಜಾದೇ ನಶೀರ್ ಅವರು ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಮೂಲಕ, ಸಾಮಾಜಿಕ ಜಾಲತಾಣ, ಮೊಬೈಲ್ ಗೇಮ್‌ಗಳ ಕಾರಣದಿಂದ ಕ್ರೀಡಾ ಚಟುವಟಿಕೆಯಿಂದ ದೂರ ಸರಿದು ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದರಿಂದ ತಮಗೂ ಮತ್ತು ದೇಶಕ್ಕೂ ಏನು ಉಪಯೋಗವಿಲ್ಲ. ಕುಸ್ತಿ ಸೇರಿದಂತೆ ವಿವಿಧ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ದೇಶಕ್ಕೆ, ಗ್ರಾಮಕ್ಕೆ ಹೆಸರನ್ನು ತರಬೇಕೆಂದು ಹೇಳಿದರು.
ರಾಜ್ಯ ಯುವ ನೇತಾರ ಮಿಥುನ ಜಿ.ಪಾಟೀಲ್ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಭಾಗವಹಿಸುವುದು ಮುಖ್ಯ. ಕುಸ್ತಿ ದೇಸೀಯ ಕ್ರೀಡೆಯಾಗಿದ್ದು, ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಭಾಗದ ಗ್ರಾಮೀಣ ಜನಪ್ರೀಯ ಕ್ರೀಡೆಯಾದ ಕುಸ್ತಿಗೆ ಪ್ರೋತ್ಸಾಹ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ತೀವ್ರ ಕುತೂಹಲ ಕೆರಳಿಸಿದ 8 ಸಾವಿರ ವಿಭಾಗದ ಕುಸ್ತಿಯಲ್ಲಿ ಗಜಾನಂದ ಬೆಳಗಾವಿ ಅವರನ್ನು ದಯಾನಂದ ಡಂಬಳ ಸೋಲಿಸಿ ಗೆಲವು ಸಾಧಿಸಿ ಗಮನ ಸೆಳೆದರು. 11ನೇ ಸಂಖ್ಯೆಯಲ್ಲಿ ಡಂಬಳ ಗ್ರಾಮದಿಂದ ಕುಸ್ತಿಯಲ್ಲಿ ಭಾಗವಹಿಸಿ ಸುಬ್ರಹ್ಮಣ್ಯ ಮಂಜುನಾಥ ಸಂಜೀವಣ್ಣನವರ ಅಭೂತಪೂರ್ವ ಗೆಲುವು ಸಾಧಿಸಿದರು.
500 ರೂ.ನಿಂದ ಶುರುವಾದ ಕುಸ್ತಿ ಪಂದ್ಯಾವಳಿ 8 ಸಾವಿರದ ಸ್ಪರ್ಧೆಯೊಂದಿಗೆ ಕೊನೆಗೊಂಡಿತು. ರಾಜ್ಯ, ಅಂತರರಾಜ್ಯ ಮತ್ತು ಸ್ಥಳೀಯರು ಸೇರಿದಂತೆ 25ಕ್ಕೂ ಹೆಚ್ಚು ಜೋಡಿ ಕುಸ್ತಿಪಟುಗಳು ಆಗಮಿಸಿ ತಮ್ಮ ತಾಕತ್ತನ್ನು ತೋರಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ, ಗ್ರಾ.ಪಂ ಉಪಾಧ್ಯಕ್ಷೆ ಲಕ್ಷö್ಮವ್ವ ಕಾಶಭೋವಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎಸ್. ಯರಾಶಿ, ಗೌಸಿದ್ದಪ್ಪ ಬಿಸನಳ್ಳಿ, ವೇ.ಮೂ. ಸಿದ್ದು ಹಿರೇಮಠ, ಮಲ್ಲಪ್ಪ ಮಠದ, ಮರಿತೆಮಪ್ಪ ಆದಮ್ಮನವರ, ಮಂಜುನಾಥ ಸಂಜೀವಣ್ಣನವರ, ಉಪತಹಸೀಲ್ದಾರ ಸಿ.ಕೆ. ಬಳವುಟಗಿ, ದೇವಪ್ಪ ಗಡೇದ, ಅಮರಪ್ಪ ಗುಡಗುಂಟಿ, ಡಾ.ಅಶೋಕ ಬಂಗಾರಶೆಟ್ಟರ ಗ್ರಾಮದ ಹಿರಿಯರು, ಯುವಕರು, ಕ್ರೀಡಾಭಿಮಾನಿಗಳು ಇದ್ದರು. ಆರ್.ಜಿ. ಕೊರ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಭಾರೀ ಜಂಗಿ ನಿಖಾಲಿ ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳು ತೊಡೆ ತಟ್ಟಿ ಸೆಡ್ಡು ಹೊಡೆದು ಒಬ್ಬರಿಗೊಬ್ಬರು ಸೆಣಸಾಡುತ್ತಿದ್ದರೆ, ಇತ್ತ ಪ್ರೇಕ್ಷಕರ ಗ್ಯಾಲರಿಯಿಂದ ಸಿಳ್ಳೆ, ಕೂಗಾಟ, ಚಪ್ಪಾಳೆಯ ಸದ್ದು ಕುಸ್ತಿಪಟುಗಳಿಗೆ ಉತ್ತೇಜನ ನೀಡಿತು. ತಮ್ಮಲ್ಲಿರುವ ನಾನಾ ಪಟ್ಟುಗಳನ್ನು ಪ್ರದರ್ಶಿಸಿ ಎದುರಾಳಿಯನ್ನು ಮಣ್ಣು ಮುಕ್ಕಿಸುವ ತವಕದ ದೃಶ್ಯವನ್ನು ಕಂಡು ಪ್ರೇಕ್ಷಕರು ಕೇಕೆ ಹಾಕಿದರು. ಗೆದ್ದ ಕುಸ್ತಿಪಟುಗಳನ್ನು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು.


