ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿಯಲ್ಲಿ ಬೆಂಗಳೂರಿನ ಕಾಲಿನ್ಸ್ ಏರೋಸ್ಪೇಸ್ ಕಂಪನಿ ವತಿಯಿಂದ ನಿರ್ಮಾಣಗೊಂಡಿರುವ ಬಾಲಕಿಯರ ಹೈಟೆಕ್ ಶೌಚಾಲಯವನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕಂಪನಿಯ ಕಾರ್ಮಿಕ ಸಂಘದ ಅಧ್ಯಕ್ಷ ಮಂಜನಗೌಡ ದೊಡ್ಡಮನಿ ಮಾತನಾಡಿ, ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ನಮ್ಮ ಕಂಪನಿಯು ಶಾಲೆಯ ಮೂಲಭೂತ ಸೌಲಭ್ಯಗಳ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಅಡರಕಟ್ಟಿ ಶಾಲೆಯು ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳು ಹೆಚ್ಚಾಗಿರುವುದರಿಂದ ಈ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮಕ್ಕಳು ಇದರ ಸದುಪಯೋಗದೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ್ ಮಾತನಾಡಿ, ತಾಲೂಕಿನ ಅಡರಕಟ್ಟಿ ಶಾಲೆಯಲ್ಲಿ ಬೆಂಗಳೂರಿನ ಕಾಲಿನ್ಸ್ ಏರೋಸ್ಪೇಸ್ ಕಂಪನಿಯವರು ಪ್ರಥಮ ಬಾರಿಗೆ ಹೈಟೆಕ್ ಶೌಚಾಲಯ ಒದಗಿಸಿಕೊಟ್ಟಿರುವದಕ್ಕೆ ಇಲಾಖೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುವದಾಗಿ ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯೆ ಎಸ್.ಎಚ್. ಉಮಚಗಿಯವರು ಮಾತನಾಡಿ, ಶಾಲೆಗೆ ಮೂಲಭೂತ ಸೌಲಭ್ಯಗಳಲ್ಲಿ ಅತ್ಯಂತ ಅವಶ್ಯಕವಾಗಿರುವ ಬಾಲಕಿಯರ ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದು ನಮ್ಮ ಶಾಲೆಯ ಮಕ್ಕಳಿಗೆ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಭಂಗಿ, ಕುಮಾರ ಚಕ್ರಸಾಲಿ, ರವಿನಾಯಕ ದೇವರಮನಿ, ಕಂಪನಿಯ ತಾಂತ್ರಿಕ ವಿಭಾಗದ ಮೌನೇಶ್ ಬನ್ನಿಮಟ್ಟಿ, ಕರಬಸಪ್ಪ ಸೊಪ್ಪಿನ ಹಾಗೂ ವೈದ್ಯರಾದ ಮರಿಗೌಡರ, ಫಕೀರೇಶ, ಮಹೇಶ ಅಂಗಡಿ ಶಾಲೆಯ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.
ಎಸ್.ಎಚ್. ಉಮಚಗಿ ಸ್ವಾಗತಿಸಿದರು. ಪಿ.ಸಿ. ಕಾಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಡಿ. ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕುಮಾರ್ ವಂದಿಸಿದರು.