ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕೇಂದ್ರ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿದ್ದು, ರೈತರ ಅನುಕೂಲಕ್ಕಾಗಿ ಹಾಗೂ ಆರ್ಥಿಕವಾಗಿ ಸಬಲರಾಗುವುದಕ್ಕೆ ಖರೀದಿ ಕೇಂದ್ರಗಳು ಸಹಕಾರಿಯಾಗಲಿವೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ಶಿರಹಟ್ಟಿಯ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಶಿರಹಟ್ಟಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ಗುಣಮಟ್ಟದ ಹೆಸರಿನಲ್ಲಿ ರೈತರಿಗೆ ಕಿರಿಕಿರಿ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕ್ಷೇತ್ರದ ರೈತರಿಗೆ ಸಹಕಾರಿಯಾಗಲಿ ಎಂದು ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರದ ಹೆಸರು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಂಡು ತಾವು ಬೆಳೆದಿರುವ ಹೆಸರು ಕಾಳನ್ನು ಕೇಂದ್ರದಲ್ಲಿ ಮಾರಾಟ ಮಾಡುವಂತೆ ಸೂಚಿಸಿದರು.
ಈ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಾಲ್ ಹೆಸರು ಕಾಳು ಖರೀದಿಗೆ ರೂ. 8.682 ನೀಡಲಾಗುತ್ತಿದೆ. ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಹೆಸರು ಕಾಳುಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯಲಿದೆ. ತಾಲೂಕಿನ ರೈತರು ಬೇಕಾ ಬಿಟ್ಟಿ ದರಕ್ಕೆ ಮಾರಟ ಮಾಡದೇ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ದರಕ್ಕೆ ಮಾರಾಟ ಮಾಡಬೇಕು ಎಂದು ಕರೆ ನೀಡಿದರು.
ಶಾಸಕ ಚಂದ್ರು ಲಮಾಣಿ, ತಹಸೀಲ್ದಾರ ಅನಿಲ ಬಡಿಗೇರ, ಟಿಎಪಿಸಿಎಂಎಸ್ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಸ ಮಹಾಜನಶೆಟ್ಟರ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಚಂದ್ರಕಾಂತ ನೂರಶೆಟ್ಟರ, ಜಾನು ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ಸುರಣ್ಣ ಕಪ್ಪತ್ತನವರ, ಉಮೇಶ ಗಾಣಗೇರ, ಅಶೋಕ ವರವಿ, ಸಂದೇಶ ಗಾಣಗೇರ, ಅಶೋಕ ಕೋಲಾರ, ಪ್ರವೀಣ ಜೈನ್, ಮುತ್ತಣ್ಣ ಕಪ್ಪತ್ತನವರ, ಶರಣಪ್ಪ ಸಿಂದಗಿ, ಎಡಿಎ ರೇವಣೆಪ್ಪ ಮನಗೂಳಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಕೃಷಿ ಇಲಾಖೆ ನೀಡಿದ ಮಾಹಿತಿ ಪ್ರಕಾರ ಈ ಬಾರಿ 3.200 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಗುರಿಗಿಂತ ಹೆಚ್ಚು ಅಂದರೆ 4.329 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿ ಫಸಲು ತೆಗೆಯಲಾಗಿದೆ. ಉತ್ತಮ ಮತ್ತು ಯೋಗ್ಯ ಬೆಂಬಲ ಬೆಲೆಯನ್ನು ರೈತರಿಗೆ ನೀಡುತ್ತಿದ್ದು, ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ತಿಳಿಸಿ ಇದರ ಲಾಭ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಕರೆ ನಿಡಿದರು.