ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ಕೇಂದ್ರಗಳು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆ, ಶಿಕ್ಷಕರ ಜ್ಞಾನ ಹೆಚ್ಚಳ, ಇಲಾಖೆ ಕಾರ್ಯಕ್ರಮಗಳಾದ ಸಮಾಲೋಚನೆ, ಶಿಕ್ಷಕರ ತರಬೇತಿ ಮತ್ತಿತರ ಮಹತ್ವದ ಉದ್ದೇಶ ಸಾಧನೆಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರಗಳ ಪಾತ್ರ ಮಹತ್ವದ್ದಾಗಿದ್ದು, ಇದು ಎಲ್ಲರಿಗೂ ಸದುಪಯೋಗವಾಗಲಿ ಎಂದು ಶಾಸಕ ಡಾ.ಚಂದ್ರು ಲಮಾಣಿ ಅಭಿಮತ ವ್ಯಕ್ತಪಡಿಸಿದರು.
ಅವರು ಪಟ್ಟಣದ ನಂ 01 ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನವೀಕೃತಗೊಂಡ ಉತ್ತರ ಸಿಆರ್‌ಸಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಶಿಕ್ಷಣ ಇಲಾಖೆಯು ಪ್ರತಿ ಕ್ಲಸ್ಟರ್‌ಗೆ ಒಂದು ಸಮೂಹ ಸಂಪನ್ಮೂಲ ಕೇಂದ್ರ ಸ್ಥಾಪಿಸಿದೆ ಹಾಗೂ ಇವು ಶಿಕ್ಷಕರ ತರಗತಿ ಪ್ರಕ್ರಿಯೆಯ ಸವಾಲುಗಳನ್ನು ಎದುರಿಸಲು, ತರಗತಿ ಪ್ರಕ್ರಿಯೆಯ ನಾವೀನ್ಯತೆ ಕಲಿಯುವ ಸ್ಥಳವಾಗಿದೆ ಎಂದು ಹೇಳಿದರು.
ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್. ನಾಣಕೀ ನಾಯಕ ಮಾತನಾಡಿ, ಕ್ಲಸ್ಟರ್ ಸಂಪನ್ಮೂಲ ಕೇಂದ್ರವನ್ನು ಇಲ್ಲಿನ ಸಂಪನ್ಮೂಲ ವ್ಯಕ್ತಿ ಉಮೇಶ ನೇಕಾರ ಅವರು ಎಲ್ಲಾ ಶಿಕ್ಷಕರ ಸಹಕಾರದಿಂದ ಹಾಗೂ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರ ಆರ್ಥಿಕ ನೆರವಿನಿಂದಾಗಿ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಿ.ಎಸ್. ಹರಲಾಪುರ, ಚಂದ್ರಕಾಂತ ನೇಕಾರ, ಗೀತಾ ಹಳ್ಯಾಳ, ಎಲ್.ಎನ್. ನಂದೆಣ್ಣವರ, ಎಮ್.ಎಮ್. ಹವಳದ, ಪುರಸಭೆ ಸದಸ್ಯೆ ಪೂರ್ಣಿಮಾ ಪಾಟೀಲ, ಎಮ್.ಆರ್. ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಗೋಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಎಚ್.ಎಸ್. ರಾಮನಗೌಡ್ರ, ಎಮ್.ಬಿ. ಹೊಸಮನಿ, ಆನಂದ ಮುಳಗುಂದ, ಎಸ್.ಡಿ. ಲಮಾಣಿ, ಎಚ್.ಎಮ್. ಗುತ್ತಲ, ಎಫ್.ಎಸ್. ತಳವಾರ, ಪ್ರಧಾನ ಗುರುಗಳಾದ ಡಿ.ಎನ್. ದೊಡ್ಡಮನಿ, ಹರೀಶ್ ಎಸ್, ಉಮೇಶ್ ಹುಚ್ಚಯ್ಯಮಠ, ಬಿ.ಎಮ್. ಯರಗುಪ್ಪಿ, ಬಿ.ಎಮ್. ಕುಂಬಾರ, ಪೂರ್ಣಾಜೆ ಕರಾಟೆ, ಸತೀಶ ಬೋಮಲೆ, ಗಿರೀಶ ನೇಕಾರ, ಉಮೇಶ ನೇಕಾರ, ಜ್ಯೋತಿ ಗಾಯಕವಾಡ ಸೇರಿದಂತೆ ತಾಲೂಕಿನ ಎಲ್ಲಾ ಇಸಿಓ, ಬಿಆರ್‌ಪಿ, ಸಿಆರ್‌ಪಿ ಮತ್ತು ಎಲ್ಲಾ ಶೈಕ್ಷಣಿಕ ಸಂಘಗಳ ಪದಾಧಿಕಾರಿಗಳು, ಲಕ್ಷ್ಮೇಶ್ವರ ಉತ್ತರ ಕ್ಲಸ್ಟರ್‌ನ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.
ಉಮೇಶ ನೇಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಅಡರಕಟ್ಟಿ, ಎಸ್.ಎಸ್. ಮುಳಗುಂದ ನಿರೂಪಿಸಿದರು. ಸತೀಶ್ ಬೋಮಲೆ ವಂದಿಸಿದರು.


