ವಿಜಯಸಾಕ್ಷಿ ಸುದ್ದಿ, ಗದಗ : ಮಾನವ ಮಾನವೀಯ ಮೌಲ್ಯಗಳೊಂದಿಗೆ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಉತ್ತಮ ಹಾದಿಯಲ್ಲಿ ಮುನ್ನಡೆಯಬೇಕಾದರೆ ನಾವು `ಏನಾದರೂ ಆಗು, ಮೊದಲು ಮಾನವನಾಗು’ ಎಂಬ ಕವಿವಾಣಿಯಂತೆ ದಾನ-ಧರ್ಮ ಮಾಡುವುದರ ಮೂಲಕ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪೂಜ್ಯ ಶ್ರೀ ಶಿವಶಾಂತವೀರ ಶರಣರು ಹೇಳಿದರು.
ಅವರು ಸುಕ್ಷೇತ್ರ ಬಳಗಾನೂರನಲ್ಲಿ ಶುಕ್ರವಾರ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕಟ್ಟಡವನ್ನು ಉದ್ಘಾಟಿಸಿ ನಂತರ ಧಾರ್ಮಿಕ ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಗಲಕೋಟೆ ಲೋಕಸಭಾ ಸಂಸದರಾದ ಪಿ.ಸಿ. ಗದ್ದಿಗೌಡರ್ ಮಾತನಾಡಿ, ಸುಕ್ಷೇತ್ರ ಬಳಗಾನೂರ ಗ್ರಾಮದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳು ನಡೆಯುತ್ತಿರುವುದು ನಮ್ಮೆಲ್ಲರಿಗೂ ಬಹಳ ಸಂತೋಷವಾಗುತ್ತಿದೆ. ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾಗಬೇಕು. ಗ್ರಾಮದ ಶ್ರೇಯೋಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕಾರ್ಯವನ್ನು ಕೈಗೊಂಡರೆ ಎಲ್ಲಾ ಕಾರ್ಯಗಳು ಸುಗಮವಾಗಿ ಈಡೇರುವವು. ಸುಕ್ಷೇತ್ರ ಬಳಗನೂರು ಗ್ರಾಮ ಮಾದರಿಯಾಗಿದೆ. ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಂತೋಷವನ್ನು ತಂದಿದೆ ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿ, ಸೊರಬ ತಾಲೂಕಿನ ಹಿರೇಮಾಗಡಿಯ ಪೂಜ್ಯ ಶ್ರೀ ಮುರುಗರಾಜೇಂದ್ರ ಶ್ರೀಗಳು, ವೇ.ಮೂ.ಶ್ರೀ.ಚೆನ್ನಯ್ಯ ಶಾಂತನಮಠ ಸೇರಿದಂತೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ಹನುಮಂತಗೌಡ ಆರ್.ಕಲ್ಮನಿ ಪ್ರಸ್ತಾವಿಕವಾಗಿ ಮಾತನಾಡಿದರು.
ಶ್ರೀ ವೀರಭದ್ರೇಶ್ವರ ಟ್ರಸ್ಟ್ ಅಧ್ಯಕ್ಷ ಶಂಕರಗೌಡ ಕಾಶೀಗೌಡರ, ಕಾರ್ಯದರ್ಶಿ ಡಾ. ಶಿವಕುಮಾರ್ ಹಿರೇಮಠ, ಎಸ್.ಬಿ. ಚಟ್ರಿ ಹಾಗೂ ಎಂ.ಎ. ಪಾಟೀಲರವರು ದೇವಸ್ಥಾನಕ್ಕೆ ದೇಣಿಗೆ ನೀಡಿದ ಸದ್ಭಕ್ತರನ್ನು ಸನ್ಮಾನಿಸಿದರು. ಪ್ರೊ. ಎಂ.ಬಿ. ಮಡಿವಾಳ ಸ್ವಾಗತಿಸಿದರು. ಪ್ರೊ.ವಿಜಯಕುಮಾರ್ ಕರುಮಡಿ ನಿರೂಪಿಸಿದರು.