ವಿಜಯಸಾಕ್ಷಿ ಸುದ್ದಿ, ಗದಗ: ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಸುಬ್ರಹ್ಮಣ್ಯಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ. 4ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಕಮಿಟಿ ಸದಸ್ಯ ಮಹೇಂದ್ರಗೌಡ ಪಾಟೀಲ ತಿಳಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಈಗಾಗಲೇ ಪ್ರತಿನಿತ್ಯ ಆಧ್ಯಾತ್ಮಿಕ ಪ್ರವಚನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಫೆ. 4ರಂದು ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅದೇ ದಿನ ಸಮಾರೋಪ ಸಮಾರಂಭವೂ ನಡೆಯಲಿದೆ ಎಂದು ತಿಳಿಸಿದರು.
ಸಮಾರಂಭದ ಸಾನ್ನಿಧ್ಯವನ್ನು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ವಹಿಸುವರು. ಹುಣಸಘಟ್ಟ-ಚೊಳಚಗುಡ್ಡದ ಗುರುಮೂರ್ತಿ ಶಿವಾಚಾರ್ಯ ಹಾಲಸ್ವಾಮಿಗಳು, ಡಾ. ಶಿವಕುಮಾರಸ್ವಾಮಿಗಳು ಚರಂತಿಮಠ, ಯಚ್ಚರೇಶ್ವರ ಸ್ವಾಮೀಜಿ, ಮರಳಸಿದ್ಧ ದೇವರ, ಪ್ರಭುಸ್ವಾಮಿ ಸರಗಣಾಚಾರಿ ನೇತೃತ್ವ ವಹಿಸಲಿದ್ದಾರೆ. ಶಾಸಕ ಸಿ.ಸಿ. ಪಾಟೀಲ, ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂದ್ರಕಾಂತಗೌಡ ಪಾಟೀಲ, ಕಾರ್ಯದರ್ಶಿ ಕಲ್ಮೇಶ್ವರ ಸಾಸಳ್ಳಿ ಉಪಸ್ಥಿತರಿರಲಿದ್ದಾರೆ ಎಂದರು.
ನೆರೆಯಿಂದಾಗಿ ಹೊಳೆಆಲೂರ ಗ್ರಾಮ ಸಾಕಷ್ಟು ಹಾನಿ ಅನುಭವಿಸಿತು. ಗ್ರಾಮದ ಕಲ್ಯಾಣಕ್ಕಾಗಿ ಸರಕಾರದ ನೆರವು ಇಲ್ಲದೇ, ಕೇವಲ ದಾನಿಗಳಿಂದ ನಿರ್ಮಿಸಲ್ಪಟ್ಟ ದೇವಸ್ಥಾನ ಈ ಭಾಗದ ಶ್ರದ್ಧಾ ಕೇಂದ್ರವಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂಠಿ, ಸಿದ್ದು ಪಾಟೀಲ ಉಪಸ್ಥಿತರಿದ್ದರು.