ರೂರ್ಬನ್ ಯೋಜನೆಯೊಂದಿಗೆ ಗ್ರಾಮಗಳ ಅಭಿವೃದ್ಧಿಯಾಗಲಿ

0
Inauguration of various works of Rurban project in Kurtakoti
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಾನುವಾರು ವಸತಿ ನಿಲಯ, ತರಕಾರಿ ಮಾರುಕಟ್ಟೆ ಮತ್ತು ಆರ್ಟಿಸನ್ ಕೇಂದ್ರಗಳ ಸದುಪಯೋಗವನ್ನು ಪಡೆದುಕೊಂಡು ಗ್ರಾಮಸ್ಥರು ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಜಿಲ್ಲಾ ಪಂಚಾಯತ ವತಿಯಿಂದ ರೂರ್ಬನ್ ಯೋಜನೆಯಡಿ ಕುರ್ತಕೋಟಿ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾದ ಜಾನುವಾರು ವಸತಿ ನಿಲಯ, ತರಕಾರಿ ಮಾರುಕಟ್ಟೆ ಮತ್ತು ಆರ್ಟಿಸನ್ ಕೇಂದ್ರಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ನಗರ ಜೀವನಕ್ಕೆ ಇರುವ ವ್ಯತ್ಯಾಸ, ಸೌಲಭ್ಯ ಸರಿದೂಗಿಸುವ ಮಹತ್ತರ ಯೋಜನೆ ಶ್ಯಾಮಪ್ರಸಾದ್ ಮುಖರ್ಜಿ ರೂರ್ಬನ್ ಯೋಜನೆಯಾಗಿದೆ. ಇದನ್ನು ಕುರ್ತಕೋಟಿ ಗ್ರಾಮಸ್ಥರು ಆಸಕ್ತಿ ಮೇರೆಗೆ ಪರಿಣಾಮಕಾರಿಯಾಗಿ ಕಾಮಗಾರಿ ಕೈಗೊಂಡು ಇಂದು ಲೋಕಾರ್ಪಣೆ ಮಾಡಿದ್ದು ಸಂತಸ ತಂದಿದೆ ಎಂದರು.

ನಮ್ಮ ಗ್ರಾಮಗಳನ್ನು ಇಚ್ಛಾಶಕ್ತಿಯಿಂದ ಅಭಿವೃದ್ಧಿಪಡಿಸಿದರೆ ದೇಶದ ಅಭಿವೃದ್ಧಿ ಮಾಡಿದಂತೆ. ದೇಶದಲ್ಲಿ ಅಭಿವೃದ್ಧಿ ಕೈಗೊಳ್ಳಲು ಅನುದಾನದ ಕೊರತೆ ಇಲ್ಲ. ಸರಿಯಾದ ಯೋಜನೆ ರೂಪಿಸಿ, ಸುಸಮಯದಲ್ಲಿ ಕಾಮಗಾರಿ ಅನುಷ್ಠಾನ ಮಾಡುವ ಬದ್ಧತೆ ನಮ್ಮಲ್ಲಿರಬೇಕು. ರೂರ್ಬನ್ ಯೋಜನೆಯನ್ನು ಹುಲಕೋಟಿ, ಕುರ್ತಕೋಟಿ, ಬಿಂಕದಕಟ್ಟಿ ಭಾಗದಲ್ಲಿ ಸಮರ್ಪಕ ಅನುಷ್ಠಾನ ಮಾಡುವ ಮೂಲಕ ದೇಶದಲ್ಲಿಯೇ ಉತ್ತಮ ಕ್ಲಸ್ಟರ್ ಆಗಿದೆ ಎಂದು ನುಡಿದರು.

Inauguration of various works of Rurban project in Kurtakoti

ಜಾನುವಾರು ವಸತಿ ನಿಲಯದಿಂದ ನಮ್ಮ ರೈತರ ಹಸುಗಳು ಸುರಕ್ಷಿತವಾಗಿ ನೈಸರ್ಗಿಕ ವಿಕೋಪಗಳಿಂದ ದೂರವಾದಂತಾಗಿದೆ. ರೈತರ ಪರವಾಗಿ ಈ ಜಾನುವಾರು ವಸತಿ ನಿಲಯವು ಕಾರ್ಯನಿರ್ವಹಿಸುಂತಾಗಲಿ. ಈ ಮೂಲಕ ಜಾನುವಾರು ಸಾಕಾಣಿಕೆ ಮಹತ್ವ ಎಲ್ಲರಲ್ಲೂ ಮೂಡಲಿ ಎಂದು ಹೇಳಿದರು.

ಗ್ರಾ.ಪಂ ಸದಸ್ಯ ಅಪ್ಪಣ್ಣ ಇನಾಮತಿ ಮಾತನಾಡಿ, ಗ್ರಾಮದಲ್ಲಿ ರೂರ್ಬನ್ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮಗಳ ಅವಶ್ಯಕತೆ ಪೂರೈಸುವಲ್ಲಿ ರೂರ್ಬನ್ ಇಂತಹ ಅನೇಕ ಕಾಮಗಾರಿಗಳಿಂದ ರೈತರಿಗೆ ಬಲ ತುಂಬುವ ಕಾರ್ಯವಾಗುತ್ತಿರುವುದು ಸಂತಸ ತಂದಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪ್ರಗತಿಗೆ ಅಭಿವೃದ್ಧಿ ಕಾಮಗಾರಿಗಳು ಪೂರಕವಾಗಿವೆ ಎಂದರು.

ಜಿ.ಪಂ ಸಿಇಓ ಭರತ ಎಸ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಮೈಲಾರಪ್ಪ ಇನಾಮತಿ, ಉಪಾಧ್ಯಕ್ಷ ಸರೋಜಾ ಅಂಗಡಿ, ಗಿರೀಶ್ ದಬಾಲಿ, ವಿರೂಪಾಕ್ಷಪ್ಪ ಹೊಸಮನಿ, ಡಾ. ಎಲ್.ಜಿ. ಹಿರೇಗೌಡ, ಬಿ.ಬಿ. ಅಸೂಟಿ, ಬಿ.ವಿ. ಪಾಟೀಲ, ರವಿ ಮೂಲಿಮನಿ, ಅಕಬರಸಾಬ ಬಬರ್ಜಿ, ಸಿದ್ದು ಪಾಟೀಲ, ಅಶೋಕ ಮಂದಾಲಿ ಇದ್ದರು.

ಜಾನುವಾರು ವಸತಿ ನಿಲಯ

* 864 ಚದರ ಮೀಟರ್ ವಿಸ್ತಿರ್ಣದಲ್ಲಿ, 1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ.
* 100 ಜಾನುವಾರುಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
* ರೋಗಗ್ರಸ್ಥ ಹಸುಗಳಿಗೆ ಮತ್ತು ಚಿಕಿತ್ಸೆಗಾಗಿ ಪ್ರತ್ಯೇಕ ಕೋಠಡಿ ವ್ಯವಸ್ಥೆ.
* ಹಾಲು ಸಂಗ್ರಹಣಾ ಕೊಠಡಿ ವ್ಯವಸ್ಥೆ.
* ಮೇವು ಸಂಗ್ರಹಣೆಗೂ ಪ್ರತ್ಯೇಕ ಕೋಠಡಿ ವ್ಯವಸ್ಥೆಯಿದೆ.

ತರಕಾರಿ ಮಾರುಕಟ್ಟೆ

785 ಚದರ ಮೀಟರ್ ವಿಸ್ತಿರ್ಣದಲ್ಲಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಗ್ರಾಮ ವ್ಯಾಪ್ತಿಯಷ್ಟೇ ಅಲ್ಲದೆ ನೆರೆಹೊರೆಯ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಸುಮಾರು 100 ಜನ ವ್ಯಾಪಾರಸ್ತರಿಗೆ ಸ್ಥಳೀಯವಾಗಿ ಉದ್ಯೋಗ ದೊರೆತಂತಾಗಿದೆ.

ಆರ್ಟಿಸನ್ ಕೇಂದ್ರ

* 565 ಚ.ಮೀ ವಿಸ್ತಿರ್ಣದಲ್ಲಿ ಒಟ್ಟು 1 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ.
* ಕರಕುಶಲ ಕಾರ್ಮಿಕರಿಗೆ ಅವಶ್ಯವಿರುವ ಕುಲುಮೆ ವ್ಯವಸ್ಥೆ ಹೊಂದಿದೆ.
* ಸಿ.ಎನ್.ಸಿ ಕಾರ್ಯಕ್ಕೆ ಯಂತ್ರಗಳ ಅಳವಡಿಕೆ ಮಾಡಲಾಗಿದೆ.
* ಸುಮಾರು 200ರಿಂದ 300 ಜನ ಗ್ರಾಮೀಣ ಕರಕುಶಲ ಕಾರ್ಮಿಕರಿಗೆ ಈ ಕೇಂದ್ರವು ಅನುಕೂಲವಾಗಲಿದೆ.


Spread the love

LEAVE A REPLY

Please enter your comment!
Please enter your name here