ಹಾಸನ: ಜಿಲ್ಲೆಯಾದ್ಯಂತ ಹೃದಯಾಘಾತದಿಂದ ಸಂಭವಿಸುವ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಚನ್ನರಾಯಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು,
ಹೈಸ್ಕೂಲ್ ಮಕ್ಕಳಿಗೆ 15 ದಿನದೊಳಗೆ ಹೃದಯ ತಪಾಸಣೆ ಮಾಡಿಸಿ. ಮಕ್ಕಳು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಪ್ರತಿ ವ್ಯಕ್ತಿಗೆ ಪ್ರತಿವರ್ಷ ಹೃದಯ ತಪಾಸಣೆ ಕಡ್ಡಾಯಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಇತ್ತೀಚೆಗೆ ಚಿಕ್ಕ ವಯಸ್ಸಿನವರು ತಡರಾತ್ರಿ, ಶಾಲೆ, ಆಟದ ಮೈದಾನಗಳಲ್ಲಿ ಹೃದಯಾಘಾತದಿಂದ ಅಸುನೀಗುತ್ತಿರುವುದು ದೊಡ್ಡ ಆತಂಕ ಎಂದರು.
ಈ ಬಗ್ಗೆ ನಾನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಅವರು ಈ ಕುರಿತು ಸರ್ಕಾರದ ದಿಕ್ಕಿನಲ್ಲಿ ನಡೆಯುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಶೀಘ್ರದಲ್ಲೇ ತಜ್ಞರ ಸಮಿತಿ ನೀಡಿರುವ ಸಲಹೆಗಳ ಆಧಾರದ ಮೇಲೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.