ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೆ 15,145.32 ಕೋಟಿಗಳಷ್ಟು ರಾಜಸ್ವ ಸಂಗ್ರಹಣೆ ಆಗಿದ್ದು, ಈ ಬಾರಿ ಕಳೆದ ಸಾಲಿಗಿಂತ ಹೆಚ್ಚು ರಾಜಸ್ವ ಸಂಗ್ರಹಣೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಅವರು ಬುಧವಾರ ವಿಧಾನ ಪರಿಷತ್ತಿನಲ್ಲಿ ಸದಸ್ಯ ಶಶಿಲ್ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಪ್ರಸಕ್ತ ಸಾಲಿನಲ್ಲಿ ರಾಜಸ್ವ ಸಂಗ್ರಹಣೆಯಲ್ಲಿ ಕಳೆದ ಸಾಲಿಗಿಂತ ಶೇ.೨೦ರಷ್ಟು ಹೆಚ್ಚು ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ. ರಾಜ್ಯದಲ್ಲಿ ಭೌತಿಕ ಖಾತೆ ಬಳಸಿ ನೋಂದಣಿ ಮಾಡುತ್ತಿದ್ದ ಸಂದರ್ಭದಲ್ಲಿ ಸುಳ್ಳು ಗುರುತಿನ ಚೀಟಿ ಸೃಷ್ಟಿಸಿಕೊಂಡು, ಸುಳ್ಳು PID ಸಂಖ್ಯೆ ಸೃಷ್ಟಿಸಿ ಸರ್ಕಾರಿ ಆಸ್ತಿ, ಅಮಾಯಕರ ಆಸ್ತಿಗಳನ್ನು ಬೇರೊಬ್ಬರ ಹೆಸರಿಗೆ ನೋಂದಣಿಯಾಗುತ್ತಿದ್ದ Impersonation ವಂಚನೆ ನೊಂದಣಿ ಪ್ರಕರಣಗಳನ್ನು, ನೋಂದಣಿ ಮತ್ತು ಮುದ್ರಾಂಕ ಶುಲ್ಕ ವಂಚನೆಯನ್ನು ಹಾಗೂ ಕಾನೂನುಬದ್ಧವಲ್ಲದ ನೋಂದಣಿಗಳನ್ನು ತಡೆಗಟ್ಟಲಾಗಿದೆ.
ಇ-ಖಾತಾ ಸಂಯೋಜನೆಯ ನಂತರ ಕಾನೂನು ಬಾಹಿರ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಸಿಕೊಳ್ಳುತ್ತಿದ್ದ ದಸ್ತಾವೇಜುಗಳ ಸಂಖ್ಯೆ ಕಡಿಮೆಯಾಗಿದ್ದು, ಕಾನೂನುಬದ್ಧವಾಗಿ ನೈಜವಾದ ಆಸ್ತಿ ನೋಂದಣಿಯಿಂದ ಸರ್ಕಾರಕ್ಕೆ ಯಾವುದೇ ಆದಾಯ ನಷ್ಟ ಉಂಟಾಗಿಲ್ಲ ಎಂದು ತಿಳಿಸಿದರು.