ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಯಜ್ಞೋಪವೀತವು ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು ಎಂದು ದತ್ತಾತ್ರೇಯ ದೇವಸ್ಥಾನದ ಅರ್ಚಕ ವೇ.ಮೂ. ಶ್ರೀವಲ್ಲಭಶಾಸ್ತ್ರೀ ಸದರಜೋಶಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಯಜ್ಞೋಪವೀತ ಧಾರಣೆ ಹಾಗೂ ಹೋಮದ ನೇತೃತ್ವ ವಹಿಸಿ ಮಾತನಾಡಿದರು.
ಯಜ್ಞೋಪವೀತ ಧಾರಣೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಅಂಗಡಿಯಿಂದ ತಂದ ಜನಿವಾರ ಸುಮ್ಮನೆ ಹಾಕಿಕೊಳ್ಳಬಾರದು. ಅದಕ್ಕೆ ಸಂಸ್ಕಾರ ಮಾಡಿ ಯಜ್ಞೋಪವೀತಾಭಿಮಾನಿ ದೇವತೆಗಳನ್ನು ಪೂಜಿಸಿ, ವೇದವ್ಯಾಸ ದೇವರಿಗೆ ಸಮರ್ಪಿಸಿ ಶ್ರದ್ಧಾ-ಭಕ್ತಿಯಿಂದ ಧರಿಸಬೇಕು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದು ಸಲ ಜನಿವಾರವನ್ನು ಧರಿಸಿದ ಮೇಲೆ ಯಾವುದೇ ಕಾರಣಕ್ಕೂ ಜನಿವಾರವನ್ನು ಧರಿಸದೇ ಬಿಡುವಂತಿಲ್ಲ. ಯಜ್ಞೋಪವೀತ ಅವನ ತಪಃಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಅರುಣ ಕುಲಕರ್ಣಿ(ಕುರಗಡ್ಡಿ) ಮಾತನಾಡಿ, ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿತ್ಯವೂ ತ್ರಿಕಾಲ ಸಂಧ್ಯಾವಂದನೆ ಮಾಡಬೇಕು. ಗಾಯತ್ರಿ ಮಂತ್ರದ ಉಚ್ಛಾರಣೆ ಮಾಡಬೇಕು. ಯಾವುದೋ ಕಾರಣಕ್ಕೆ ಜನಿವಾರ ತುಂಡಾದರೆ ತಕ್ಷಣವೆ ಅದನ್ನು ಬದಲಿಸಬೇಕು. ಅಶೌಚ ಕರ್ಮಾದಿ ಕಾರ್ಯಗಳಿಂದ ಮೈಲಿಗೆಯುಂಟಾದರೆ ಹಳೆಯದನ್ನು ತೆಗೆದು ಹೊಸ ಜನಿವಾರವನ್ನು ಧರಿಸಬೇಕಾದುದು ಯಜ್ಞೋಪವೀತ ಧರಿಸಿದವನ ಕರ್ತವ್ಯವಾಗಿದೆ ಎಂದರು.
ಈವೇಳೆ ಅರುಣ ಗ್ರಾಮಪುರೋಹಿತ, ಆರ್.ಡಿ. ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಆನಂದ ಕುಲಕರ್ಣಿ, ಅಜಿತ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆನಂದ ಕಾಳೆ, ನಾಗರಾಜ ನಾಡಿಗೇರ, ರಾಮಕೃಷ್ಣ ಸದರಜೋಶಿ ಸೇರಿದಂತೆ ಬ್ರಹ್ಮ ಸಮಾಜದವರಿದ್ದರು.