ಸತ್ಸಂಗಗಳ ಮೂಲಕ ಬದುಕಿನ ಮೌಲ್ಯ ಹೆಚ್ಚಿಸಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸದ ಪುಣ್ಯಕಾಲದಲ್ಲಿ ಪ್ರತಿಯೊಬ್ಬರೂ ಪುರಾಣ, ಪುಣ್ಯಕಥೆ ಆಲಿಸುವ ಮೂಲಕ ಸನ್ಮಾರ್ಗ, ಧರ್ಮಾಚರಣೆ, ಸತ್ಸಂಗಗಳಲ್ಲಿ ಪಾಲ್ಗೊಂಡು ಬದುಕಿನ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶಿದ್ದೇಶ್ವರ ಸತ್ಸಂಗ ಬಳಗ, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ, ಲಕ್ಷ್ಮೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್, ತಾಲೂಕು ಕದಳಿ ಮಹಿಳಾ ವೇದಿಕೆ, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಹಾಗೂ ಅಕ್ಕಾಮಹಾದೇವಿ ಬಳಗ, ಪ್ರೇಮಕ್ಕ ಬಿಂಕದಕಟ್ಟಿ ಅಭಿಮಾನಿ ಬಳಗಗಳ ಸಂಯುಕ್ತಾಶ್ರಯದಲ್ಲಿ ತಿಂಗಳ ಪರ್ಯಂತ ನಡೆಯುವ 20ನೇ ವರ್ಷದ `ಶ್ರಾವಣ ಸಂಜೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಸ್ತುತ ದೂರದರ್ಶನ, ಮೊಬೈಲ್, ಕಂಪ್ಯೂಟರ್ ಪ್ರಭಾವದಿಂದ ಪುರಾಣ ಪ್ರವಚನಗಳಿಂದ ದೂರ ಸರಿಯುತ್ತ, ಧಾರ್ಮಿಕ ಮನೋಭಾವ ಕಡಿಮೆಯಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಿಳಾ ಬಳಗದವರು ಕೈಗೊಳ್ಳುವ ಸತ್ಸಂಗ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮ ವೇದಿಕೆಗಳಾಗಿವೆ. ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನ ಜಂಜಾಟದ ನಡುವೆ ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಅನೇಕ ಮಹಾತ್ಮರು, ಪುಣ್ಯಪುರುಷರು, ಶರಣರು, ಸಂತರು, ಕಾಯಕ ಯೋಗಿಗಳ ಚಿಂತನೆ, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಅಗಡಿ ಕಾಲೇಜಿನ ಉಪನ್ಯಾಸಕ ಸಿ.ಎಸ್. ಹಿರೇಮಠ ಮಾತೆಂಬುದು ಜ್ಯೋತಿರ್ಲಿಂಗ ವಿಷಯದ ಕುರಿತು ಉಪನ್ಯಾಸ ನೀಡಿ, ಮಾತುಗಳು ಮನುಷ್ಯನ ವ್ಯಕ್ತಿತ್ವದ ಪ್ರತಿಬಿಂಬವಾಗಿದ್ದು, ಎಲ್ಲರನ್ನೂ ಗೆಲ್ಲುವ ಮಾತಿನ ಅಂತಃಶಕ್ತಿ ಅರಿತು ನಡೆದರೆ ಬದುಕು ಹಸನಾಗುತ್ತದೆ ಎಂದರು.

ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ ಪ್ರಾಸ್ತಾವಿಕ ಮಾತನಾಡಿ, ಕಳೆದ 20 ವರ್ಷಗಳಿಂದ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ದಿ. ಪ್ರೇಮಕ್ಕ ಬಿಂಕದಕಟ್ಟಿ ಅವರ ನೇತೃತ್ವದಲ್ಲಿ ಶ್ರಾವಣ ಮಾಸದ ಕಾರ್ಯಕ್ರಮ ಮಾಡುತ್ತಾ ಬರಲಾಗಿದೆ. ಈ ವರ್ಷವೂ ಧರ್ಮದ ವಿಚಾರ, ಚಿಂತನ-ಮಂಥನ, ಶರಣರ ಕುರಿತ ಉಪನ್ಯಾಸಗಳು, ಸಾಹಿತ್ಯ, ವಚನಗಳ ಮಹತ್ವ, ಸ್ವಾತಂತ್ರ ಹೋರಾಟಗಾರರ ಕುರಿತು ವಿವಿಧ ಉಪನ್ಯಾಸರಿಂದ ಕಾರ್ಯಕ್ರಮ ನಡೆಸುತ್ತಿದೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಲಲಿತಾ ಕೆರಿಮನಿ, ಸುಭಾಸ ಓದುನವರ, ಎಸ್.ಬಿ. ಕೊಣ್ಣೂರ, ಪಿ.ಬಿ. ಖರಾಟೆ, ಎಂ.ಎನ್. ಗೊರವರ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ನಂದಿನಿ ಮಾಳವಾಡ ಮುಂತಾದವರಿದ್ದರು. ಕೆಯುಡಬ್ಲೂಜೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ದಿಗಂಬರ ಪೂಜಾರ, ತನುಶ್ರೀ ಬದಿ, ಕೃಷ್ಣಪ್ರಿಯಾ ಬದಿ ಅವರನ್ನು ಸನ್ಮಾನಿಸಲಾಯಿತು. ರತ್ನಾ ಕರ್ಕಿ ನಿರೂಪಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ವಿ.ಎಲ್. ಪೂಜಾರ ಮಾತನಾಡಿ, ಕೃಷಿ ಪ್ರಧಾನ ನಾಡಿನಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಹಬ್ಬ, ಆಚರಣೆ, ಸಂಪ್ರದಾಯ, ಧರ್ಮಕಾರ್ಯ, ಪುರಾಣ-ಪ್ರವಚನ ಕೇಳುವ ಮೂಲಕ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


Spread the love

LEAVE A REPLY

Please enter your comment!
Please enter your name here