ಗದಗ: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಗಳ ಕಿರುಕುಳ ಮುಂದುವರಿದಿದೆ. ಒಂದೆಡೆ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಆದರೆ ಗದಗ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳ ಕಿರುಕುಳದ ವರದಿ ಒಂದರ ಮೇಲೊಂದರಂತೆ ವರದಿ ಆಗುತ್ತಲೇ ಇದೆ.
ಅದರಂತೆ ಇಲ್ಲೋರ್ವ ದಂಪತಿ ಮನೆ ಕಟ್ಟಲು ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಆದರೆ ಇದೀಗ ಮೈಕ್ರೋ ಫೈನಾನ್ಸ್ ಗಳ ಕಿರುಕುಳ ತಾಳಲಾರದೆ ಊರೇ ಬಿಟ್ಟಿದ್ದಾರೆ. ಎಸ್, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಖಾನಾಪುರ ಗ್ರಾಮದ ರಫೀಕ್ ದೊಡ್ಡಮನಿ ಹಾಗೂ ರಿಯಾನ ದೊಡ್ಡಮನಿ ಕುಟುಂಬದ ಕಣ್ಣೀರ ಕಥೆ ಕೇಳುತ್ತಿದ್ದರೆ ನಿಜಕ್ಕೂ ಕರಳು ಚುರ್ ಎನ್ನುತ್ತೆ. ಈ ದಂಪತಿ ಮನೆ ಕಟ್ಟೋದಕ್ಕೆ ಗದಗನ ಎಎಮ್ಒಎಮ್ ಹೌಸಿಂಗ್ ಎಂಬ ಮೈಕ್ರೋಫೈನಾನ್ಸ್ ಕಂಪನಿಯಲ್ಲಿ 3 ಲಕ್ಷ ಸಾಲ ಪಡೆದಿದ್ದರು.
ಇದರಲ್ಲಿ ದಂಪತಿ 1.30 ಲಕ್ಷ ಹಣ ಪಾವತಿ ಮಾಡಿದ್ದಾರೆ. ಆದರೆ ಮೈಕ್ರೋ ಫೈನಾನ್ಸ್ ನವರು ನೀವು ಕಟ್ಟಿರುವ ಹಣ, 90 ಸಾವಿರ ಬಡ್ಡಿ, 40 ಸಾವಿರ ಮಾತ್ರ ಅಸಲು ಅಂತಿದ್ದಾರೆ. ಅಲ್ಲದೇ ಮನೆ ಬಳಿ ನಿತ್ಯವೂ ಬಂದು ಬಡ ಕುಟುಂಬಕ್ಕೆ ಕಿರುಕುಳ ಕೊಡುತ್ತಿದ್ದಾರೆ. ಸಾಲ ತೀರಿಸಲು ಆಗದೇ ಇದ್ದರೆ ಸತ್ತೋಗಿ ಮನ್ನಾ ಆಗತ್ತೆ ಅಂತ ಮೈಕ್ರೋ ಸಿಬ್ಬಂದಿ ಈ ಬಡ ದಂಪತಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಇದರಿಂದ ಬೇಸತ್ತ ದಂಪತಿ ಕಟ್ಟಿದ ಕನಸಿನ ಮನೆ ತೊರೆದು ಈಗ ಊರು ತೊರೆದಿದ್ದಾರೆ. ಇದೀಗ ಈ ಕುಟುಂಬ ಗದಗ ನಗರದ ಸ್ಲಂವೊಂದರಲ್ಲಿ ಬದುಕು ನಡೆಸುತ್ತಿದ್ದಾರೆ. ಮತ್ತೊಂದೆಡೆ ಈ ದಂಪತಿ ಮನೆ ತೊರೆದ ಬಳಿಕ ಮೈಕ್ರೋ ಸಿಬ್ಬಂದಿಗಳು, ಸಾಲಕ್ಕೆ ಮನೆ ಅಡಮಾನ ಇಡಲಾಗಿದೆ ಅಂತ ಮನೆಗೆ ಕೆಂಪು ಅಕ್ಷರಗಳಲ್ಲಿ ಬರೆಸಿದ್ದಾರೆ.
ಇನ್ನೂ ಕಟ್ಟಿರೋ ಹೊಸ ಮನೆಯಲ್ಲಿ ಜೀವನ ನಡೆಸದೆ ಊರು ತೊರೆದಿರುವ ಈ ದಂಪತಿ, ಆತ್ಮಹತ್ಯೆಗೂ ಕೂಡ ನಿರ್ಧಾರ ಮಾಡಿದ್ದರು. ಬಾವಿಗೆ ಹಾರಿ ಬಡ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಮನೆಯವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿತ್ತು. ಇನ್ನೂ ಫೈನಾನ್ಸ್ ಸಿಬ್ಬಂದಿಯ ಟಾರ್ಚರ್ ಬಗ್ಗೆ ಎಳೆಎಳೆಯಾಗಿ ಹೇಳುತ್ತ ನೊಂದ ಮಹಿಳೆ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಹಣ ಕಟ್ಟಲಾಗದೇ ಈ ಬಡ ಕುಟುಂಬ ಪೇಚಾಡುವ ಸ್ಥಿತಿಗೆ ಬಂದಿದೆ.