ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಮಹಾಕದನದ ಮೇಲೆ ನೆಟ್ಟಿದೆ. ಮಾರ್ಚ್ 5ರಂದು ನಡೆಯಲಿರುವ ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪಾಳಯದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ.
ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ನಡುವೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಕುರಿತಂತೆ ಚರ್ಚೆಗಳು ಜೋರಾಗಿದೆ.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕಾಗಿ ಭಾರತ ತನ್ನ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲು ಸಜ್ಜಾಗಿದೆ. ಇಷ್ಟು ದಿನ ಮಿಸ್ಟರಿ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ವರುಣ್ ಚಕ್ರವರ್ತಿ ಬದಲಿಗೆ ಅನುಭವಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಂಗ್ಲೆಂಡ್ ಬ್ಯಾಟರ್‌ಗಳು ವೇಗದ ಬೌಲಿಂಗ್‌ಗಿಂತ ಸ್ಪಿನ್ ಎದುರಿಸಲು ಹೆಚ್ಚು ಕಷ್ಟಪಡುತ್ತಾರೆ ಎಂಬುದು ಹಿಂದಿನ ದಾಖಲೆಯಿಂದ ಸ್ಪಷ್ಟವಾಗಿದೆ. ವಿಶೇಷವಾಗಿ ಕುಲದೀಪ್ ಅವರ ಗೂಗ್ಲಿ ಹಾಗೂ ಲೂಪ್ ಎಸೆತಗಳು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಮತ್ತು ಜೋಸ್ ಬಟ್ಲರ್‌ರಿಗೆ ಸವಾಲಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟಿ20 ವಿಶ್ವಕಪ್‌ನ ಕಳೆದ ಆವೃತ್ತಿಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಗಳು ಸಾಕಷ್ಟು ರೋಚಕತೆ ಮೂಡಿಸಿವೆ. 2022ರ ಟೂರ್ನಿಯಲ್ಲಿ ಇಂಗ್ಲೆಂಡ್ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. 2024ರಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಮಣಿಸಿ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟ್ರೋಫಿ ಜಯಿಸಿತ್ತು.
ಇದೀಗ ಮತ್ತೊಮ್ಮೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ಪಂದ್ಯಕ್ಕೂ ಮುನ್ನ ಕುತೂಹಲ ಹೆಚ್ಚಾಗಿದೆ. ಭಾರತ ಸ್ಪಿನ್ ಅಸ್ತ್ರದ ಮೂಲಕ ಆಂಗ್ಲರ ಪಡೆಯನ್ನು ಕಟ್ಟಿಹಾಕಲು ಯತ್ನಿಸುತ್ತಿದ್ದರೆ, ಇಂಗ್ಲೆಂಡ್ ತಿರುಗೇಟು ನೀಡಲು ಸಜ್ಜಾಗಿದೆ. ಕ್ರಿಕೆಟ್ ಅಭಿಮಾನಿಗಳು ಈ ಮಹತ್ವದ ಕದನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.



