ರಾಂಚಿ: ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ ತವರಿನಲ್ಲಿ ಟೀಂ ಇಂಡಿಯಾದ ರನ್‌ಮಷೀನ್ ವಿರಾಟ್ ಕೊಹ್ಲಿ ಮಿಂಚಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಮನಮೋಹಕ ಬೌಂಡರಿ ಹಾಗು ಸಿಕ್ಸರ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿ, ತಮ್ಮ ವೃತ್ತಿಜೀವನದ 52ನೇ ಏಕದಿನ ಶತಕವನ್ನು ಬಾರಿಸಿ ತಂಡಕ್ಕೆ ಬಲ ನೀಡಿದ್ದಾರೆ. ನಾಯಕ ರೋಹಿತ್ ಶರ್ಮಾ ಸಿಡಿಸಿದ ಅರ್ಧಶತಕವೂ ತಂಡದ ಸ್ಕೋರ್‌ನ್ನು ಬೃಹತ್ ಮೊತ್ತದತ್ತ ಎತ್ತಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಾಲ್ಕನೇ ಓವರ್‌ನಲ್ಲಿಯೇ ಆರಂಭಿಕ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಬಹುಬೇಗನೇ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದ ಕ್ಷಣದಿಂದಲೇ ರನ್ ಗಳಿಸಲು ಪ್ರಾರಂಭಿಸಿದರು.
ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ವಿರಾಟ್ ಅರ್ಧಶತಕವನ್ನು ತಲುಪುವ ಮೊದಲು ಮೂರು ಸಿಕ್ಸರ್‌ಗಳನ್ನು ಬಾರಿಸಿದದರು. ಈ ಅವಧಿಯಲ್ಲಿ, ಕೊಹ್ಲಿ ರೋಹಿತ್ ಶರ್ಮಾ ಅವರೊಂದಿಗೆ 136 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ರೋಹಿತ್ ಔಟಾದ ನಂತರ, ಮೂರು ವಿಕೆಟ್‌ಗಳು ತ್ವರಿತವಾಗಿ ಬಿದ್ದವು. ಆದರೆ ಕೊಹ್ಲಿ ಮಾತ್ರ ಇನ್ನೊಂದು ತುದಿಯಲ್ಲಿ ಭದ್ರವಾಗಿ ನಿಂತು ತಂಡದ ಇನ್ನಿಂಗ್ಸ್ ನಿಭಾಯಿಸಿದರು.
ನಂತರ 38 ನೇ ಓವರ್ನಲ್ಲಿ ಕೊಹ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಅದ್ಭುತ ಶತಕವನ್ನು ಪೂರೈಸಿದರು. 102 ಎಸೆತಗಳಲ್ಲಿ ತಮ್ಮ 52 ನೇ ಏಕದಿನ ಶತಕವನ್ನು ಪೂರೈಸಿದ ಕೊಹ್ಲಿ, ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.
ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 51 ಶತಕಗಳೊಂದಿಗೆ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದ ದಾಖಲೆ ಹೊಂದಿದ್ದರು. ಆದರೆ ಈಗ ಕೊಹ್ಲಿ 306 ಏಕದಿನ ಪಂದ್ಯಗಳಲ್ಲಿ ಕ್ರಿಕೆಟ್ ದೇವರ ದಾಖಲೆ ಮುರಿದಿದ್ದಾರೆ. ಈ ವರ್ಷ ಇದು ಕೊಹ್ಲಿ ಅವರ ಎರಡನೇ ಶತಕವಾಗಿದೆ. ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಶತಕ ಬಾರಿಸಿದ್ದರು.


