ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಮತ್ತು ಅವಮಾನಕಾರಿ ಕಾಮೆಂಟ್ಗಳನ್ನು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಂ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಆರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದಿನ ಒಂದು ವಾರದೊಳಗೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುವ ಸಾಧ್ಯತೆ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಜಯಲಕ್ಷ್ಮಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿಕೊಂಡು ಮಾನಹಾನಿ ಮಾಡುವ ಉದ್ದೇಶದಿಂದ ಕಾಮೆಂಟ್ಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ತ್ವರಿತ ತನಿಖೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ.
ತನಿಖೆಯ ಭಾಗವಾಗಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಹಾಕಿದ್ದ ಪೋಸ್ಟ್ಗಳು, ಕಾಮೆಂಟ್ಗಳು ಹಾಗೂ ಇತರೆ ಡಿಜಿಟಲ್ ದಾಖಲೆಗಳನ್ನು ಪ್ರಮುಖ ಸಾಕ್ಷಿಗಳಾಗಿ ಸಂಗ್ರಹಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಸುಮಾರು 50 ಪುಟಗಳ ಚಾರ್ಜ್ಶೀಟ್ ತಯಾರಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಕೇಂದ್ರ ಕಚೇರಿಗಳಿಗೆ ಪೊಲೀಸರು ಪತ್ರ ಬರೆದಿದ್ದು, ಕೆಲವು ಖಾತೆಗಳ (ಐಡಿ) ವಿವರಗಳು ಮತ್ತು ತಾಂತ್ರಿಕ ಮಾಹಿತಿಗಾಗಿ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಇನ್ನೂ ಕೆಲವು ಸಾಮಾಜಿಕ ಜಾಲತಾಣ ಖಾತೆಗಳ ಸಂಪೂರ್ಣ ಮಾಹಿತಿಗಳು ಲಭ್ಯವಾಗಿಲ್ಲದಿರುವುದು ತನಿಖೆಗೆ ಅಡ್ಡಿಯಾಗಿರುವ ಅಂಶವಾಗಿದೆ.



