ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮಾ. 3ರಿಂದ 7ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿಐಟಿಯು ಸಂಘಟನೆಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.
ನಗರದ ಪತ್ರಿಕಾಭವದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಬಜೆಟ್ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿಧ ವಿಭಾಗದ ಕಾರ್ಮಿಕರು ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿ ಮಾ.3ರಂದು ಗ್ರಾಮ ಪಂಚಾಯಿತಿ ನೌಕರರು, ಮಾ.4ರಂದು ಬಿಸಿಯೂಟ ನೌಕರರು, ಮಾ.5ರಂದು ಕಟ್ಟಡ ಕಾರ್ಮಿಕರು, ಮಾ.6ರಂದು ಹಮಾಲಿ ಕಾರ್ಮಿಕರು ಸೇರಿದಂತೆ ವಿವಿಧ ವಲಯದ ಅಸಂಘಟಿತ ಹಾಗೂ ಕಾರ್ಖಾನೆ ಕಾರ್ಮಿಕರು, ಮಾ.7ರಂದು ಅಂಗನವಾಡಿ ನೌಕರರು ಸಾವಿರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸುತ್ತಾರೆ ಎಂದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮತ್ತೊಮ್ಮೆ ಶೇ.99ರಷ್ಟು ದುಡಿಯುವ ವರ್ಗಕ್ಕೆ ದ್ರೋಹ ಮಾಡಿದ್ದಾರೆ. ವಿದ್ಯುತ್, ತೈಲ, ಸಾರಿಗೆ ಮತ್ತು ಹೆದ್ದಾರಿಗಳು, ಕಲ್ಲಿದ್ದಲು ಮತ್ತು ಇತರ ಖನಿಜಗಳು ಸೇರಿದಂತೆ ಅಮೂಲ್ಯವಾದ ಮೂಲಸೌಕರ್ಯಗಳು, ಅಮೂಲ್ಯ ಖನಿಜಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಬೇಕಾದ ಸ್ಪಷ್ಟ ನೀಲಿ ನಕ್ಷೆಯನ್ನು ಸಿದ್ಧಪಡಿಸಿದೆ ಎಂದರು.
ಕೇಂದ್ರ ಸರಕಾರವು ಅನುಸರಿಸುವ ಆರ್ಥಿಕ ನೀತಿಗಳನ್ನೇ ರಾಜ್ಯದ ಕಾಂಗ್ರೆಸ್ ಸರಕಾರವು ಬಹುತೇಕ ಅನುಸರಿಸುತ್ತಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ. ಆದರೆ ಕಾಂಗ್ರೆಸ್ ಸರಕಾರದ ನೀತಿಗಳನ್ನು ವಿಭಿನ್ನ ರೀತಿಯಲ್ಲಿ ರೂಪಿಸಲು ಆಗುತ್ತಿಲ್ಲ. ಈ ಎರಡೂ ಪಕ್ಷಕಗಳು ಬೇರೆ ಬೇರೆಯಾದರೂ ನೀತಿಗಳೆಲ್ಲ ಒಂದೇ ಆಗಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
2023ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ ವೇತನದ ವೈಜ್ಞಾನಿಕ ಪುನರ್‌ವಿಮರ್ಶೆಯ ಭವರಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗುತ್ತ ಬಂದರೂ ಆ ಬಗ್ಗೆ ಧ್ವನಿ ಎತ್ತಿಲ್ಲ. ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ್ದ ಕೆಲಸದ ಅವಧಿಯನ್ನು ಹೆಚ್ಚಿಸುವ ಆದೇಶ ಸಹ ಹಿಂಪಡೆದಿಲ್ಲ ಎಂದು ದೂರಿದರು.
29 ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿಗಳನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು. ಕಾರ್ಮಿಕರ ಪರವಾದ ಕಾನೂನುಗಳನ್ನು ಜಾರಿ ಮಾಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಕಾರ್ಮಿಕ ಮುಖಂಡರಾದ ಬಸವರಾಜ ಮಂತೂರ, ಮೆಹಬೂಬ್ ಸಾಬ್ ಹವಾಲ್ದಾರ್ ಇದ್ದರು.
ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಕನಿಷ್ಠ ವೇತನ ಹಾಗೂ ಕಾರ್ಮಿಕ ಕಾನೂನುಗಳ ಜಾರಿ ವಿಷಯದಲ್ಲಿ ಅಗತ್ಯ ಕ್ರಮ ವಹಿಸಬೇಕು. ಕಾರ್ಮಿಕರನ್ನು ನವಗುಲಾಮರನ್ನಾಗಿ ಮಾಡುವ ಕೋಡ್ ಬಿಲ್ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಅದನ್ನು ಕೈಬಿಡುವಂತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಹೇಶ ಪತ್ತಾರ ತಿಳಿಸಿದರು.