ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಪಟ್ಟಣದ ತಹಸೀಲ್ದಾರರ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಸಂಘದ (ಅIಖಿU ಸಂಯೋಜಿತ) ತಾಲೂಕು ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹ ೨ನೇ ದಿನಕ್ಕೆ ಕಾಲಿಟ್ಟಿದೆ.
ಈ ವೇಳೆ ಸಿಪಿಐಎಂ ಪಕ್ಷದ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ಗಜೇಂದ್ರಗಡ ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಸುತ್ತಮುತ್ತಲಿನ ಜನರಿಗೆ, ವ್ಯಾಪಾರಸ್ಥರಿಗೆ ಜೀವಾಳವಾಗಿದೆ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಾಗಿದ್ದು, ರಸ್ತೆ ಮೇಲೆ ಇರುವ ಮಾರುಕಟ್ಟೆಯನ್ನು ಏಕಾಏಕಿ ಸ್ಥಳಾಂತರ ಮಾಡಿದ್ದರಿಂದ ಎಷ್ಟೋ ಬಡ ಕುಟುಂಬಗಳು ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಸಭೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆAದು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಮಾರುಕಟ್ಟೆ ಸ್ಥಳಾಂತರದಿAದ ವ್ಯಾಪಾರಸ್ಥರ ಬದುಕು ಕಷ್ಟವಾಗಿದೆ. ನಮಗೆ ಒಂದು ಸೂಕ್ತ ಮಾರುಕಟ್ಟೆ ನೀಡಬೇಕು, ನಮ್ಮ ಹಕ್ಕುಗಳ ರಕ್ಷಣೆ ಆಗಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಆಹೋರಾತ್ರಿ ಧರಣಿಯನ್ನು ಮುಂದುವರೆಸುತ್ತೇವೆ ಎಂದರು.
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದರು.
ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ, ಬೀದಿ ಬದಿ ವ್ಯಾಪರಸ್ಥರ ಸಂಘದ ಅಧ್ಯಕ್ಷ ಶಾಮೀದಸಾಬ ದಿಂಡವಾಡ, ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ, ಚೌಡಮ್ಮ ಯಲು, ಮೈಬೂಸಾಬ್ ಮಾಲ್ದಾರ, ಮುತ್ತಣ್ಣ ರಾಠೋಡ, ಅಂಬರೇಶ ಚವ್ಹಾಣ, ಮಾರುತಿ ಗೊಂದಳೆ, ಮುತ್ತಣ್ಣ ತೇಜಪ್ಪ ರಾಠೋಡ, ವೀಷ್ಣು ಚಂದುಕರ, ಮಹಾಂತೇಶ ಹೀರೇಮಠ, ಬಡಿಗೇರ ಪರಸುರಾಮ, ಗಂಗಾಧರ ಸತ್ಯನ್ಯವರ ಮುಂತಾದವರು ಭಾಗವಹಿಸಿದ್ದರು.
ಹೋರಾಟವನ್ನು ಬೆಂಬಲಿಸಿ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, ವ್ಯಾಪಾರಸ್ಥರಿಗೆ ಸೂಕ್ತ ಮಾರುಕಟ್ಟೆ ಮತ್ತು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಸ್ಥಳೀಯ ಸಂಸ್ಥೆ ಒದಗಿಸಬೇಕು. ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಗಮನಹರಿಸಬೇಕು. ಇಲ್ಲವಾದರೆ ವ್ಯಾಪಾರಸ್ಥರ ಮಕ್ಕಳು, ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.