ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಾನಸಿಕ, ದೈಹಿಕ ಆರೋಗ್ಯ, ನಿತ್ಯದ ಕೆಲಸದ ಒತ್ತಡ ನಿವಾರಣೆ, ಪರಸ್ಪರ ಸ್ನೇಹ, ಸೌಹಾರ್ದತೆ, ಬಾಂಧವ್ಯ ವೃದ್ಧಿಗಾಗಿ ಕ್ರೀಡಾಕೂಟಗಳು ವೇದಿಕೆಗಳಾಗಿವೆ ಎಂದು ತಹಸೀಲ್ದಾರ ವಾಸುದೇವ ಎಂ.ಸ್ವಾಮಿ ಹೇಳಿದರು.
ಅವರು ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ತಾಲೂಕು ಆಡಳಿತ, ವಿವಿಧ ಇಲಾಖೆಯ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಇಂಡಿಪೆಂಡೆನ್ಸ್ ಡೇ ಕಪ್- ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ರೀಡಾಕೂಟಗಳು ಸೋಲು-ಗೆಲುವಿನ ಸ್ಪರ್ಧೆಯಾಗಿರದೇ ಇಲಾಖೆಗಳ ನೌಕರ ವರ್ಗದ ನಡುವೆ ಸಮನ್ವಯತೆ, ಸ್ನೇಹ, ಬಾಂಧವ್ಯ ಮೂಡಿಸುವುದಾಗಿದೆ. ಕ್ರೀಡೆಗಳು ಎಲ್ಲರ ನಿತ್ಯ ಜೀವನದ ಅಂಗವಾಗಬೇಕು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸಿಪಿಐ ನಾಗರಾಜ ಮಾಡಳ್ಳಿ ಮಾತನಾಡಿ, ಸ್ವಾತಂತ್ರೋತ್ಸವ ಆಚರಣೆ ನಿಮಿತ್ತ ವಿವಿಧ ಇಲಾಖೆಗಳ ನೌಕರರೆಲ್ಲರನ್ನೂ ಸೇರಿಸಿ ಕ್ರಿಕೆಟ್ ಪಂದ್ಯಾವಳಿ ಸಂಘಟಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶುಕ್ರವಾರ ಬೆಳಿಗ್ಗೆ ಪೊಲೀಸ್ ಪ್ಯಾಂಥರ್ಸ್ ಹಾಗೂ ಟಿಎಂಸಿ ಟೈಟಾನ್ಸ್ ನಡುವೆ ಉದ್ಘಾಟನೆ ಪಂದ್ಯಾವಳಿ ನಡೆದು ಪೊಲೀಸ್ ಪ್ಯಾಂಥರ್ಸ್ ಜಯ ಗಳಿಸಿತು. ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪುರಸಭೆ ಮುಖ್ಯಾದಿಕಾರಿ ಮಹೇಶ ಹಡಪದ, ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ, ಪಿಎಸ್‌ಐ ಈರಪ್ಪ ರಿತ್ತಿ, ವಿಜಯ ಪವಾರ, ಶಿಕ್ಷಣ ಇಲಾಖೆಯ ಈಶ್ವರ ಮೆಡ್ಲೇರಿ, ಡಿ.ಎಚ್. ಪಾಟೀಲ, ಬಿ.ಎಸ್. ಹರ್ಲಾಪುರ, ತಾಲೂಕಿನ ಹೆಸ್ಕಾಂ, ಸಾರಿಗೆ, ಕೃಷಿ, ಶಿಕ್ಷಣ, ಪೊಲೀಸ್, ಪುರಸಭೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ಹಾಗೂ ಮಾಧ್ಯಮ ಸ್ನೇಹಿತರಿದ್ದರು.
ಪೊಲೀಸ್, ಕಂದಾಯ, ಶಿಕ್ಷಣ, ಪುರಸಭೆ, ತಾಲೂಕಾ ಪಂಚಾಯತ, ಕೆಪಿಟಿಸಿಎಲ್, ಕೆಎಸ್‌ಆರ್‌ಟಿಸಿ, ಆರೋಗ್ಯ, ಕೃಷಿ ಸೇರಿ ವಿವಿಧ ಇಲಾಖೆಗಳೊಂದಿಗೆ ಮಾಧ್ಯಮ ಸೇರಿ ಒಟ್ಟು 10 ತಂಡಗಳು ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ. ಐಪಿಎಲ್ ರೀತಿಯಲ್ಲಿ ಪ್ರತಿ ತಂಡಕ್ಕೂ ವಿಶೇಷವಾದ ನಾಮಾಂಕಿತವನ್ನಿಟ್ಟು ಪ್ರತ್ಯೇಕ ಜರ್ಸಿ ಮಾಡಲಾಗಿದೆ. 10 ಓವರ್‌ಗಳ ಪಂದ್ಯದಲ್ಲಿ ನಿತ್ಯ 2 ತಂಗಳು ಸೆಣಸಲಿದ್ದು, 23 ಪಂದ್ಯಾವಳಿಗಳು ನಡೆದು ಆ.11ಕ್ಕೆ ಫೈನಲ್ ನಡೆಯಲಿದೆ.