ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಆಗಸ್ಟ್ 15ರಂದು ಬೆಳ್ಳಿಗೆ 7.30ಕ್ಕೆ ತಾಲೂಕು ಆಡಳಿತ ಸೌಧದಲ್ಲಿ ಹಾಗೂ ಬೆಳಿಗ್ಗೆ 9 ಗಂಟೆಗೆ ನೆಹರು ಮೈದಾನದಲ್ಲಿ ತಾಲೂಕು ಆಡಳಿತದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹುಬ್ಬಳ್ಳಿ ಶಹರ ತಹಸೀಲ್ದಾರ ಕಲಗೌಡ ಪಾಟೀಲ ಹೇಳಿದರು.
ಬುಧವಾರ ತಾಲೂಕು ಆಡಳಿತ ಸೌಧದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪೊಲೀಸ್, ಗೃಹ ರಕ್ಷಕ, ಎನ್‌ಸಿಸಿ, ಎನ್‌ಎನ್‌ಎಸ್ ದಳಗಳು ಪಥ ಸಂಚಲನದಲ್ಲಿ ಭಾಗವಹಿಸಲಿವೆ. 20ಕ್ಕೂ ಅಧಿಕ ಶಾಲೆಗಳ ತಂಡಗಳು ಸಹ ಪಥ ಸಂಚಲನದಲ್ಲಿ ಪಾಲ್ಗೊಳ್ಳಬೇಕು. ಜನಪದ ಮತ್ತು ಹಳ್ಳಿ ಸೊಗಡಿನ ಸಾಂಸ್ಕೃತಿಕ ಕಾರ್ಯಕ್ರಗಳಿಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ದೇಶಭಕ್ತಿ ಸಾರುವ ಗೀಗೀ ಪದ, ಲಾವಣಿ ಪದ, ಕಿರು ನಾಟಕ, ನೃತ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂಡಗಳಿಗೆ ಪ್ರಶಸ್ತಿ, ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿಗಳಲ್ಲಿ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಒಂದೇ ಅಳತೆಯ ಭಾವಚಿತ್ರಗಳನ್ನು ಇಟ್ಟು ಪೂಜೆ ಸಲ್ಲಿಸಬೇಕು. ಅನುಭವಿಕರಿಂದ ರಾಷ್ಟçಧ್ವಜವನ್ನು ಸರಿಯಾಗಿ ಕಟ್ಟುವಂತೆ ನಿಗಾ ವಹಿಸಬೇಕು.
ಯಾವುದೇ ರೀತಿಯಲ್ಲಿ ಧ್ವಜವನ್ನು ಅಗೌರವ ತೋರುವ ರೀತಿಯಲ್ಲಿ ಕಟ್ಟಬಾರದು. ಶಾಲಾ ವಿದ್ಯಾರ್ಥಿಗಳ ಜೊತೆಗೆ ಪಾಲಕರು, ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ ಪ್ರಕಾಶ ನಾಶಿ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಸಿ.ವಿ. ಕರವೀರಮಠ, ಗೃಹ ರಕ್ಷಕ ದಳದ ಕೃಷ್ಣಾ ಬ್ಯಾಡಗಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಪ್ರಭುಲಿಂಗ ಗಡ್ಡದ ಸೇರಿದಂತೆ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ ಮಾತನಾಡಿ, ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಬಸ್ ಮೂಲಕ ನೆಹರು ಮೈದಾನಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು. ದೇಶಭಕ್ತಿಯ ಕನ್ನಡ ಗೀತೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳಸಬೇಕು. ಕುಡಿಯುವ ನೀರು, ಉಪಹಾರ, ಸಾರಿಗೆ ವ್ಯವಸ್ಥೆ, ಅಗ್ನಿಶಾಮಕ, ಆರೋಗ್ಯ ಸಿಬ್ಬಂದಿ, ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಆಯಾ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ರೀತಿಯಲ್ಲಿ ತೊಂದರೆಗಳು ಆಗಬಾರದು ಎಂದು ಅವರು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.