World Championship of Legends: ಪಾಕ್ ಸೋಲಿಸಿ ಲೆಜೆಂಡ್ಸ್ ಚಾಂಪಿಯನ್ ಶಿಪ್ ಗೆದ್ದ ಭಾರತ!

0
Spread the love

ಲೆಜೆಂಡ್ಸ್ ವಿಶ್ವ ಚಾಂಪಿಯನ್ ಶಿಪ್ 2024ರ ಕೂಟದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

Advertisement

ಜುಲೈ 13ರಂದು ಶನಿವಾರ ಬರ್ಮಿಂಗ್ ಹ್ಯಾಮ್‌ನ ಎಡ್ಜ್ ಬಾಸ್ಟನ್ ನಲ್ಲಿ ಜರುಗಿದ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಯುವರಾಜ್ ಸಿಂಗ್ ಪಡೆ 5 ವಿಕೆಟ್‌ಗಳಿಂದ ಸೋಲಿಸಿ ಲೆಜೆಂಡ್ಸ್ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದೆ.

2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಫೈನಲ್ ನಲ್ಲೂ ಪಾಕಿಸ್ತಾನವನ್ನೇ ಸೋಲಿಸಿದ್ದ ಭಾರತ ತಂಡ ಚಾಂಪಿಯನ್ ಆಗಿದ್ದನ್ನು ಲೆಜೆಂಡ್ಸ್ ಲೀಗ್ ನೆನಪಿಸಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಭಾರತ, ಬದ್ಧವೈರಿ ಪಾಕ್ ಗೆ ಮಣ್ಣು ಮುಕ್ಕಿಸಿತು. 2007ರಲ್ಲೂ ಇದೇ ರೀತಿ ಎಂಎಸ್ ಧೋನಿ ನಾಯಕತ್ವದಲ್ಲಿ ಮೆನ್ ಇನ್ ಗ್ರೀನ್ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು.

ಅಂಬಾಟಿ ರಾಯುಡು ಅವರು ಭರ್ಜರಿ ಅರ್ಧಶತಕ (50) ಸಿಡಿಸಿ ಪಾಕಿಸ್ತಾನ ನೀಡಿದ್ದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ನೆರವಾದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಚಾಂಪಿಯನ್ಸ್, ತನ್ನ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 19.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಗೆದ್ದು ಬೀಗಿತು. ಇದರೊಂದಿಗೆ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು ಗಮನ ಸೆಳೆಯಿತು.

ಭಾರತ ಟೂರ್ನಿಯ ಲೀಗ್‌ನಲ್ಲಿ ಗೆದ್ದಿದ್ದೇ 2 ಪಂದ್ಯ. ಆಡಿದ ಪಂದ್ಯಗಳಲ್ಲಿ 3ರಲ್ಲಿ ಸೋತಿದ್ದ ಯುವಿ ಪಡೆ, ಅಂಕಪಟ್ಟಿಯಲ್ಲಿ ರನ್ರೇಟ್ ಆಧಾರದಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆಯಿತು.

ಸೌತ್ ಆಫ್ರಿಕಾ ಚಾಂಪಿಯನ್ಸ್ ಗಿಂತಲೂ ಕೊಂಚ ರನ್ರೇಟ್ ಅಧಿಕ ಪಡೆದ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಬಳಿಕ ಭರ್ಜರಿ ಫಾರ್ಮ್ ನಲ್ಲಿದ್ದ ಆಸೀಸ್ ತಂಡವನ್ನು ಸೆಮೀಸ್ನಲ್ಲಿ 86 ರನ್ಗಳಿಂದ ಗೆದ್ದು ಬೀಗಿತ್ತು. ಇದೀಗ ಫೈನಲ್ ನಲ್ಲೂ ನೆರೆಯ ರಾಷ್ಟ್ರವನ್ನು ಮಣಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ.


Spread the love

LEAVE A REPLY

Please enter your comment!
Please enter your name here