ನವದೆಹಲಿ:- ಭಾರತಕ್ಕೆ ಅಮೆರಿಕ ಬಿಗ್ ಶಾಕ್ ಕೊಟ್ಟಿದ್ದು, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತೀಯ ಆಮದುಗಳ ಮೇಲೆ ಹೆಚ್ಚುವರಿ 25% ಸುಂಕ ವಿಧಿಸಿದ ಪರಿಣಾಮ ಚಿನ್ನದ ಬೆಲೆ ಏರಿಕೆ ಕಂಡಿದೆ.
ಚಿನ್ನದ ಬೆಲೆ 3,600 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,02,620 ರೂ.ಗೆ ತಲುಪಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. 99.9% ಶುದ್ಧತೆಯ ಚಿನ್ನವು ಬುಧವಾರ 10 ಗ್ರಾಂಗೆ 99,020 ರೂ.ಗೆ ತಲುಪಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಶೇ.99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ 3,600 ರುಪಾಯಿ ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳು ಸೇರಿದಂತೆ) 1,02,200 ರು. ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ.
ಆ.1 ರಿಂದಲೇ ಜಾರಿಗೆ ಬರುವಂತೆ ಭಾರತದ ಆಮದುಗಳ ಮೇಲೆ ಅಮೆರಿಕವು ಶೇ.25 ರಷ್ಟು ಸುಂಕ ವಿಧಿಸಿತ್ತು. ರಷ್ಯಾ ಜೊತೆಗಿನ ಒಪ್ಪಂದ ಕೊನೆಗಾಣಿಸದಿದ್ದಕ್ಕೆ ಹೆಚ್ಚುವರಿಯಾಗಿ ಶೇ.25 ಸುಂಕವನ್ನು ಭಾರತದ ಮೇಲೆ ವಿಧಿಸಿದೆ. ಆ ಮೂಲಕ 50% ಸುಂಕವನ್ನು ಅಮೆರಿಕ ಹಾಕಿದೆ. ಇದು ಎರಡು ಆರ್ಥಿಕತೆಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ ಎಂದು ವರದಿಯಾಗಿದೆ.