ವಿಜಯಸಾಕ್ಷಿ ಸುದ್ದಿ, ಧಾರವಾಡ : ಮಾತೃಭಾಷೆಯ ಜೊತೆಗೆ ಇನ್ನೊಂದು ಭಾಷೆಯನ್ನು ಗೌರವಿಸುವ ಮನೋಭಾವ ಎಲ್ಲರಲ್ಲೂ ಬರಬೇಕು’ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎ.ಮುರಿಗೆಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಮಾನಸೋಲ್ಲಾಸ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ನವದೆಹಲಿ ಭಾರತೀಯ ಭಾಷಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟç ಮಟ್ಟದ ಭಾರತೀಯ ಭಾಷಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ 160 ಭಾಷೆಗಳಲ್ಲಿ, 60 ಭಾಷೆಗಳು ಅಳಿವಿನಂಚಿನಲ್ಲಿದ್ದು, ಕರ್ನಾಟಕದಲ್ಲಿ 40 ಭಾಷೆಗಳಲ್ಲಿ 4 ಭಾಷೆಗಳು ಈಗಾಗಲೇ ಕಣ್ಮೆರೆಯಾಗಿವೆ. ಒಂದು ಭಾಷೆಯಿಂದ ಇನ್ನೊಂದು ಭಾಷೆ ಕೊಡಕೊಳ್ಳುವಿಕೆಯಿಂದ ಭಾಷೆಗಳು ಬೆಳೆಯುತ್ತದೆ. ಇಂಗ್ಲೀಷ್‌ನಲ್ಲಿ ಗ್ರೀಕ್ ಮತ್ತು ಲ್ಯಾಟೀನ್ ಭಾಷೆಯ ಶಬ್ದಗಳನ್ನು ತೆಗೆದರೆ ಅದಕ್ಕೆ ಮಹತ್ವವೇ ಕಡಿಮೆಯಾಗುತ್ತದೆ. ಭಾರತ ದೇಶ ಹಲವಾರು ಭಾಷೆಗಳ ತವರೂರು. ಎಲ್ಲ ಭಾಷೆಗಳೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿವೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಕೆ.ಬಿ. ಗುಡಿಸಿ ಮಾತನಾಡಿ, ಭಾಷೆ ಬಳಕೆಯಾಗದೇ ಹೋದಲ್ಲಿ ಅದು ನಾಶವಾಗುತ್ತದೆ. ಸಿನೇಮಾಗಳಿಂದ ಕೂಡ ಭಾಷೆಯ ಕಲಿಕೆ ಹೆಚ್ಚುತ್ತದೆ ಎಂದ ಅವರು, ಕರ್ನಾಟಕದಲ್ಲಿ ಕನ್ನಡ ಬೆಳೆಯಬೇಕಾದರೆ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂದರು.
ಕಾರ್ಯಕ್ರಮದಲ್ಲಿ ಕವಿವಿ ಹಣಕಾಸು ಅಧಿಕಾರಿ ಪ್ರೊ. ಸಿ.ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಪ್ರೊ. ಎನ್.ಎಚ್. ಕಲ್ಲೂರು, ಸಂಯೋಜಕರಾದ ಡಾ. ಎ.ಬಿ. ವೇದಮೂರ್ತಿ, ಸಂಚಾಲಕರಾದ ಡಾ. ಜಿ.ಕೆ. ಬಡಿಗೇರ ಉಪಸ್ಥಿತರಿದ್ದರು. ಪ್ರೊ.ಶಾಮಲಾ ರತ್ನಾಕರ ನಿರೂಪಿಸಿದರು.