ನವದೆಹಲಿ: ಭಾರತವು ಈಗ 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷಗಳಲ್ಲಿ ದೇಶವು ಇಂಧನ ಆಮದು ಮೂಲಗಳನ್ನು ವೈವಿಧ್ಯಗೊಳಿಸಿರುವುದಾಗಿ ಹೇಳಿದರು. ಹಿಂದೆ ಭಾರತವು 27 ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳುತ್ತಿದ್ದರೆ, ಈಗ ಅದು 41 ದೇಶಗಳಿಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದರು.
ದೇಶದಲ್ಲಿ 53 ಲಕ್ಷ ಮೆಟ್ರಿಕ್ ಟನ್ ಇಂಧನ ನಿಕ್ಷೇಪಗಳಿದ್ದು, ತೈಲ, ಅನಿಲ ಹಾಗೂ ರಸಗೊಬ್ಬರ ಸಾಗಿಸುವ ಟ್ಯಾಂಕರ್‌ಗಳು ಸುರಕ್ಷಿತವಾಗಿ ಭಾರತ ತಲುಪುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಉಂಟಾಗಿರುವ ಪರಿಸ್ಥಿತಿಗಳು ದೀರ್ಘಕಾಲದ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸವಾಲುಗಳನ್ನು ಎದುರಿಸಲು ದೇಶ ಒಗ್ಗಟ್ಟಿನಿಂದ ಸಿದ್ಧರಾಗಬೇಕು ಎಂದು ಪ್ರಧಾನಿ ಕರೆ ನೀಡಿದರು. ಕೋವಿಡ್ ಸಮಯದಲ್ಲಿ ದೇಶವು ಒಗ್ಗಟ್ಟಿನಿಂದ ಸವಾಲುಗಳನ್ನು ಎದುರಿಸಿದ್ದನ್ನು ಅವರು ಉದಾಹರಿಸಿದರು.
ಯುದ್ಧ ಆರಂಭವಾದ ಬಳಿಕ 3.75 ಲಕ್ಷಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ಇರಾನ್‌ನಿಂದ 700ಕ್ಕೂ ಹೆಚ್ಚು ಜನರು ಸೇರಿದಂತೆ ಸುಮಾರು 1,000 ಭಾರತೀಯರು ವಾಪಸ್ಸಾಗಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗಲ್ಫ್ ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.



