ಕಲಬುರಗಿ: ಬಿಜೆಪಿಯವರು ಮಾತೆತ್ತಿದರೆ ದೇಶಭಕ್ತಿ ಅಂತಾರೆ. ನಿನ್ನೆ ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಆಡಿದ್ರು. ಬಿಜೆಪಿಯವರಿಗೆ ನಾಚಿಕೆ ಆಗೋದಿಲ್ವಾ..? ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಅವರ ಜೊತೆ ಮ್ಯಾಚ್ ಆಡ್ಲಿಲ್ಲ ಅಂದ್ರೆ ಪಾಯಿಂಟ್ಸ್ ಹೋಗ್ತಾವೆ ಅಂತ ಬಿಜೆಪಿ ನಾಯಕರು ಹೇಳ್ತಾರೆ. ಬಿಡ್ರಿ ಏಷ್ಯಾ ಕಪ್ ಆಡುವುದು. ಈ ಹಿಂದೆ ಶ್ರೀಲಂಕಾದಲ್ಲಿ ತಮಿಳುವರಿಗೆ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಅಂತ ಭಾರತ ಏಷ್ಯಾ ಕಪ್ ನಿಂದ ದೂರ ಉಳಿದಿತ್ತು ನೆನಪಿಲ್ಲವಾ ? ನಮ್ಮ ಸಿದ್ಧಾಂತ ನಮಗೆ ಮುಖ್ಯ ಅಂದ್ಬಿಟ್ಟು ಪಾಕಿಸ್ತಾನದೊಂದಿಗಿನ ಮ್ಯಾಚ್ ಬಿಡಬೇಕಾಗಿತ್ತು. ಯಾರೋ ಸ್ಪಾನ್ಸರ್ ಶಿಪ್ ಕೊಡ್ತಾರೆ ಅಂತ ಹೋಗೋದಾ ? ರಕ್ತ ನೀರು ಒಂದು ಕಡೆ ಹರಿಯುವುದಿಲ್ಲ ಅಂತ ಹೇಳಿದವರು ಈಗೇನು ಮಾಡಿದ್ದಾರೆ? ಮೋದಿಯವರೆ ಮೋಟಾ ಭಾಯ್ ಗೆ ಹೇಳಕೊಕ್ಕಾಗಲ್ವಾ..? ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಧರ್ಮಸ್ಥಳ ಕೇಸ್ ವಿಳಂಬ ಆಗ್ತಿದೆ ಎನ್ನೋ ಬಿಜೆಪಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರಿಗೆ ಏನ್ ಬೇಕಾಗಿದೆ. ಒಂದ್ ಕಡೆ ಧರ್ಮಸ್ಥಳ ಚಲೋ ಅಂತೀರಿ. ಇನ್ನೊಂದ ಕಡೆ ಸೌಜನ್ಯ ಮನೆಗೆ ಹೋಗ್ತಿರಿ. ಇವಾಗ ಸೌಜನ್ಯ ಮನೆಯವರೆ ರಾಶಿ ರಾಶಿ ಬುರುಡೆ ಸಿಕ್ಕಿದೆ ಅಂತಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಏನ್ ಹೇಳ್ತಾರೆ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಎರಡೂ ದಿನ ಧರ್ಮಸ್ಥಳ ಚಲೋ, ಎರಡೂ ದಿನ ಮದ್ದೂರು ಚಲೋ, ಎರಡೂ ದಿನ ಚಾಮುಂಡೇಶ್ವರಿ ಚಲೋ ಅಂತಾರೆ..ಇವರ ಹೋರಾಟ ಇಷ್ಟೆ ಅಲ್ವ? ಒಂದು ಹೋರಾಟವಾದ್ರು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದಾರಾ ಇವರು ಎಂದು ವ್ಯಂಗ್ಯವಾಡಿದ್ದಾರೆ.
ಅದಲ್ಲದೆ ಸಿ.ಟಿ.ರವಿ, ತಲೆ ಕಡಿರಿ, ತೊಡೆ ಮುರಿರಿ ಅಂತಾರೆ. ಯಾವಾತ್ತಾದ್ರೂ ಇವರು ತಮ್ಮ ಮಕ್ಕಳಿಗೆ ಈ ರೀತಿ ಹೇಳಿದ್ದಾರಾ..? ತಮ್ಮ ಮಕ್ಕಳನ್ನ ಬಿಟ್ಟು ಬಡ ಮಕ್ಕಳಿಗೆ ಪ್ರಚೋದನೆ ಮಾಡ್ತಾರೆ. ಇದೇನಾ ಇವರ ರಾಜಕೀಯ..? ಎಂದು ಬಿಜೆಪಿ ನಾಯಕರ ವಿರುದ್ದ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.


