ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಮಹಿಳೆ–ಪುರುಷ ಸಮಾನತೆ ಸಾಧ್ಯವಾದಾಗ ಮಾತ್ರ ಸಮಗ್ರ ಮತ್ತು ಸಮೃದ್ಧ ಭಾರತ ನಿರ್ಮಾಣವಾಗಬಲ್ಲದು ಎಂದು ನೈರುತ್ಯ ರೈಲ್ವೆ ವಲಯದ ಹಣಕಾಸು ಸಲಹೆಗಾರರು ಹಾಗೂ ಮುಖ್ಯ ಲೆಕ್ಕಾಧಿಕಾರಿ ಕುಸುಮಾ ಹರಿಪ್ರಸಾದ ಅಭಿಪ್ರಾಯಪಟ್ಟರು.
ಕೇಶ್ವಾಪುರದ ನೈರುತ್ಯ ರೈಲ್ವೆ ಕನ್ನಡ ಸಂಘದ ವತಿಯಿಂದ ಶುಕ್ರವಾರ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ತಾನು ಅಬಲೆಯಲ್ಲ ಸಬಲೆ ಎಂಬುದನ್ನು ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವುದರ ಮೂಲಕ ತೋರಿಸುತ್ತಿದ್ದಾರೆ. ಶಿವಾಜಿಯ ತಾಯಿ ಜೀಜಾಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಕ್ಕ ಮಹಾದೇವಿ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಸೇರಿದಂತೆ ಹಲವು ಮಹಿಳೆಯರು ಇತಿಹಾಸದಲ್ಲಿ ಹೆಸರು ದಾಖಲಿಸಿದ್ದಾರೆ ಎಂದರು.
ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಅನಿತಾ ಶಾಸ್ತ್ರಿ ಮಾತನಾಡಿ, ಮಹಿಳೆ ಎಷ್ಟೆಲ್ಲಾ ಸಾಧನೆ ಮಾಡಿದರೂ ಆಕೆಯ ಮೇಲಿನ ಶೋಷಣೆ ನಿಲ್ಲುತ್ತಿಲ್ಲ ಎಂಬುದು ಕಳವಳದ ಸಂಗತಿ. ಹೆಣ್ಣುಮಕ್ಕಳಿಗೆ ಕಾನೂನುಗಳ ಅರಿವು ಇರಬೇಕು ಎಂದರು.
ಕೇಂದ್ರೀಯ ರೈಲ್ವೆ ಆಸ್ಪತ್ರೆಯ ಹಿರಿಯ ವಿಭಾಗೀಯ ವೈದ್ಯಾಧಿಕಾರಿ ತೇಜಸ್ವಿನಿ ಗೌರಿಪುರ ಮಾತನಾಡಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆ ಮುಖ್ಯ. ಎಲ್ಲರೂ ಒಂದಾಗಿ ದೌರ್ಜನ್ಯವನ್ನು ವಿರೋಧಿಸಬೇಕು ಎಂದರು.
ಸಂಘದ ಅಧ್ಯಕ್ಷ ಬಿ.ಎಲ್. ಶಿವಕುಮಾರ, ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಬಿರಾದಾರ, ಮೈಲಾರಲಿಂಗ ಕಬ್ಬೂರ, ಜೈರಾಮ, ಪ್ರಾಣೇಶ, ಚಂದ್ರಶೇಖರ, ಮಹಾಂತಪ್ಪ ನಂದೂರ, ಮಹೇಶ ಎ.ಎಸ್, ಸಿ.ಎಂ. ಮುನಿಸ್ವಾಮಿ, ಕಿರಣ ಚಿನ್ನಾ ರಾಠೋಡ, ಜಗದೀಶ ಭಜಂತ್ರಿ, ರಮೇಶ ಚವ್ಹಾಣ, ಆದಯ್ಯ ಹಿರೇಮಠ, ಚನ್ನಬಸಪ್ಪ ಚೌಗಲಾ, ಸುರೇಶ ರಾಠೋಡ, ರಂಗಪ್ಪ, ಗೂಳಪ್ಪ ನಂದಿ, ಶ್ರೀನಿವಾಸ, ಅಜ್ಜಪ್ಪ ಯತ್ನಟ್ಟಿ, ಶಾಂತಗೌಡ, ಪುಂಡಲೀಕ ಮುಂತಾದವರಿದ್ದರು. ಮಮತಾ ಮ್ಯಾಗೇರಿ ಸ್ವಾಗತಿಸಿದರು.