2026ರ ಮೊದಲ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ. ಈ ಗೆಲುವಿನ ಪ್ರಮುಖ ಶಿಲ್ಪಿ ವಿರಾಟ್ ಕೊಹ್ಲಿ ಆಗಿದ್ದಾರೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 300 ರನ್‌ಗಳ ಕಠಿಣ ಗುರಿ ನೀಡಿತು. ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲಿ ಒತ್ತಡ ಇದ್ದರೂ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಇನಿಂಗ್ಸ್‌ನ್ನು ಅದ್ಭುತವಾಗಿ ಕಟ್ಟಿದರು.
ಕೊಹ್ಲಿ 91 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್‌ಗಳ ಸಹಿತ 93 ರನ್‌ಗಳನ್ನು ಬಾರಿಸಿ ಔಟಾದರು. ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 49 ಓವರ್‌ಗಳಲ್ಲಿ 306 ರನ್ ಗಳಿಸಿ 4 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.
ಪಂದ್ಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ‘ಇದು ನಿಮ್ಮ ಎಷ್ಟನೇ ಪ್ಲೇಯರ್ ಆಫ್ ದಿ ಮ್ಯಾಚ್?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, “ನಿಜವಾಗಿ ನನಗೆ ಎಷ್ಟನೇದು ಎಂಬುದು ಗೊತ್ತಿಲ್ಲ” ಎಂದು ನಗುತ್ತಾ ಹೇಳಿದರು.
ಇನ್ನೂ ತಮ್ಮ ಪ್ರಶಸ್ತಿಗಳ ಕುರಿತು ಮಾತನಾಡಿದ ಅವರು, “ನನಗೆ ಸಿಗುವ ಟ್ರೋಫಿಗಳನ್ನು ನಾನು ಗುರುಗಾಂವ್‌ನಲ್ಲಿರುವ ನನ್ನ ತಾಯಿಗೆ ಕಳುಹಿಸುತ್ತೇನೆ. ಅವುಗಳನ್ನು ನೋಡಿ ಅವರು ತುಂಬಾ ಹೆಮ್ಮೆಪಡುತ್ತಾರೆ. ಎಲ್ಲಾ ಪ್ರಶಸ್ತಿಗಳನ್ನು ಅವರೇ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ” ಎಂದು ಭಾವನಾತ್ಮಕವಾಗಿ ಹೇಳಿದರು. ಈ ಗೆಲುವಿನೊಂದಿಗೆ ಭಾರತ ತಂಡ ಹೊಸ ವರ್ಷದ ಕ್ರಿಕೆಟ್ ಪ್ರಯಾಣವನ್ನು ಆತ್ಮವಿಶ್ವಾಸದಿಂದ ಆರಂಭಿಸಿದೆ.



