ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಇಂದು ನಡೆದ ಪರೇಡ್ ಹಲವು ವಿಶೇಷತೆಗಳಿಂದ ಗಮನ ಸೆಳೆದಿದೆ. ಪರೇಡ್ ನ ಆರಂಭದಲ್ಲೇ ಬ್ಯಾಕ್ಟ್ರಿಯನ್ ಒಂಟೆಗಳು, ಶಿಕಾರಿ ಪಕ್ಷಿ ಬ್ಲ್ಯಾಕ್ ಕೈಟ್ಸ್, ಸೈನಿಕ ಶ್ವಾನಗಳು ಸೇರಿದಂತೆ ರಕ್ಷಣಾ ವಲಯದ ವಿವಿಧ ಘಟಕಗಳು ಭಾರತೀಯ ಸೇನೆಯ ಶಕ್ತಿಯನ್ನೆತ್ತಿ ತೋರಿಸಿವೆ.
ಭಾರತೀಯ ಸೇನೆಯ ರಿಮೌಂಟ್ ಮತ್ತು ಪಶುವೈದ್ಯಕೀಯ ದಳ (RVC) ತನ್ನ ಸಮರ್ಪಿತ ಪ್ರಾಣಿ ತಂಡವನ್ನು ಪರೇಡ್ ನಲ್ಲಿ ಪರಿಚಯಿಸಿದ್ದು, ಕಠಿಣ ಭೂಪ್ರದೇಶಗಳಲ್ಲಿ ಸೇನೆಗೆ ಸೌಲಭ್ಯ ನೀಡುವ ಪ್ರಾಣಿಗಳ ಸೇವೆಯನ್ನು ಅನಾವರಣಗೊಳಿಸಿದೆ.
ʻಸೈಲೆಂಟ್ ವಾರಿಯರ್ಸ್ʼ ಎಂದೇ ಗುರುತಿಸಿಕೊಂಡ ಈ ತಂಡವು ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಾ ಶತ್ರುಗಳ ಮೇಲೆ ನಿಗಾ ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ಬಾರಿ ಪರೇಡ್ ನಲ್ಲಿ ಪ್ರದರ್ಶಿತ ಪ್ರಾಣಿಗಳಲ್ಲಿ ಬ್ಯಾಕ್ಟ್ರಿಯನ್ ಒಂಟೆಗಳು, ಜನ್ಸ್ಕಾರ್ ಪೋನಿಗಳು, ಬ್ಲ್ಯಾಕ್ ಕೈಟ್ಸ್, ವಿಜಿಲೆಂಟ್ ಬರ್ಡ್ಸ್, ಭಾರತೀಯ ತಳಿಯ ಸೇನಾ ನಾಯಿಗಳು (ಮುಧೋಳ ಹೌಂಡ್, ರಾಂಪುರ್ ಹೌಂಡ್, ಚಿಪ್ಪಿಪರೈ, ಕೊಂಬೈ ಮತ್ತು ರಾಜಪಾಳಯಂ) ಮತ್ತು ಸಾಂಪ್ರದಾಯಿಕ ಮಿಲಿಟರಿ ಶ್ವಾನಗಳು ಸೇರಿದ್ದರು.
ಈ ಪ್ರದರ್ಶನವು ಪ್ರಾಣಿಗಳ ಮಹತ್ವಪೂರ್ಣ ಪಾತ್ರ ಹಾಗೂ ಭಾರತೀಯ ಸೇನೆಯ ನವೀನತೆಯನ್ನು ಜನತೆಗೆ ತೋರಿಸುವುದರ ಜೊತೆಗೆ, ಗಣರಾಜ್ಯೋತ್ಸವದ ಸಾಂಸ್ಕೃತಿಕ ಮತ್ತು ಸೇನಾ ವೈಭವವನ್ನು ಹೆಚ್ಚಿಸಿದೆ.



