ನ್ಯೂಯಾರ್ಕ್: ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಎಲ್ಲಿಕಾಟ್ ನಗರದಲ್ಲಿ ಭಾರತ ಮೂಲದ ಯುವತಿ ನಿಕಿತಾ ಗೋಡಿಶಾಲ (27) ಶವ ಪತ್ತೆಯಾಗಿದೆ.
ಆಕೆ ಡೇಟಾ ವಿಶ್ಲೇಷಕಿಯಾಗಿದ್ದು, ಶವವು ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ (26) ಒಡೆತನದ ಅಪಾರ್ಟ್‌ಮೆಂಟ್‌ನಲ್ಲಿ ಕಂಡುಬಂದಿದೆ ಎಂದು ಹೊವಾರ್ಡ್ ಕೌಂಟಿ ಪೊಲೀಸರು ತಿಳಿಸಿದ್ದಾರೆ.
ನಿಕಿತಾ ಜನವರಿ 2ರಂದು ನಾಪತ್ತೆಯಾಗಿದ್ದಾಳೆ ಎಂದು ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಡಿಸೆಂಬರ್ 31ರಂದು ಸಂಜೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಕೊನೆಯದಾಗಿ ಅವಳನ್ನು ನೋಡಿದ್ದೇನೆ ಎಂದು ಹೇಳಿದ್ದಾನೆ. ಮಾಹಿತಿ ಆಧರಿಸಿ ಪೊಲೀಸರು ಶೋಧ ನಡೆಸಿದಾಗ ಶವ ಪತ್ತೆಯಾಗಿದ್ದು, ದೇಹದ ಮೇಲೆ ಗಾಯಗಳಿರುವುದು ಕಂಡುಬಂದಿದೆ.
ನಿಕಿತಾ ನಾಪತ್ತೆ ಬಗ್ಗೆ ದೂರು ನೀಡಿದ ದಿನವೇ ಅರ್ಜುನ್ ಭಾರತಕ್ಕೆ ತೆರಳಿದ್ದಾನೆ. ಡಿಸೆಂಬರ್ 31ರ ಸಂಜೆ 7 ಗಂಟೆಯ ನಂತರ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆತನ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪದಡಿ ಬಂಧನ ವಾರಂಟ್ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಲು ಫೆಡರಲ್ ಸಂಸ್ಥೆಗಳ ಸಹಾಯ ಪಡೆಯಲಾಗಿದೆ. ಈ ಪ್ರಕರಣದಲ್ಲಿ ನಿಕಿತಾ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಸಹಾಯ ನೀಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.



