ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮದುವೆಗೆ ಮೈಸೂರಲ್ಲಿ ಅದ್ಧೂರಿ ಸೆಟ್ ರೆಡಿಯಾಗುತ್ತಿದೆ. ಈಗಾಗಲೇ ಡಾಲಿ ಹಾಗೂ ಧನ್ಯತಾ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈ ಮಧ್ಯೆ ಡಾಲಿ ಧನಂಜಯ್ ಮನೆಗೆ ತೆರಳಿದ ಮೈಸೂರಿನ ಅಂಚೆ ಇಲಾಖೆ ಅಧಿಕಾರಿಗಳ ಹೊಸ ಬಾಳಿಗೆ ಕಾಲಿಡುತ್ತಿರುವ ಜೋಡಿಗೆ ವಿಶೇಷ ಉಡುಗೊರೆಯನ್ನು ನೀಡಿ ಶುಭ ಹಾರೈಸಿದ್ದಾರೆ.
ಡಾಲಿ ಮದುವೆ ಆಹ್ವಾನ ಪತ್ರಿಕೆ ಮೆಚ್ಚಿ ಭಾರತೀಯ ಅಂಚೆ ಇಲಾಖೆ ವಿಶೇಷ ಉಡುಗೊರೆಯನ್ನು ನೀಡಿದೆ. ಧನಂಜಯ್-ಧನ್ಯತಾ ಮದುವೆಗೆ ಅಂಚೆ ಇಲಾಖೆ ವಿಶೇಷವಾದ 12 ಸ್ಟ್ಯಾಂಪ್ ಮುದ್ರಣ ಮಾಡಿದೆ. ಇದರ ಜೊತೆಗೆ ವಿವಾಹದ ಶುಭಾಶಯ ತಿಳಿಸಿದೆ. ಇದನ್ನು ಫ್ರೇಮ್ ಹಾಕಿಸಿ ಧನಂಜಯ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆಗೆ ಇನ್ ಲ್ಯಾಂಡ್ ಲೆಟರ್ ಮಾದರಿಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿ ಗಣ್ಯರಿಗೆ ಹಂಚಿದ್ದರು. ನಿಮ್ಮ ಈ ನಡೆಯಿಂದ ಮತ್ತೆ ಇನ್ ಲ್ಯಾಂಡ್ ಲೆಟರ್‌ಗಳಿಗೆ ಬೇಡಿಕೆ ಬಂದಿದೆ. ಜನರು ಮತ್ತೆ ಅಂಚೆ ಕಚೇರಿಯಲ್ಲಿ ಇನ್ ಲ್ಯಾಂಡ್ ಲೆಟರ್ ಕೇಳಿ ಪಡೆಯುತ್ತಿದ್ದಾರೆ. ಮದುವೆಯ ಮೂಲಕ ಮಾದರಿಯಾದ ನಿಮಗೆ ಅಭಿನಂದನೆಗಳು ಅಂಚೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಅಂಚೆ ಇಲಾಖೆ ನೀಡಿದ ಈ ಉಡುಗೊರೆಗೆ ಧನಂಜಯ-ಧನ್ಯತಾ ಸಂತಸ ವ್ಯಕ್ತಪಡಿಸಿದ್ದಾರೆ.