ನವದೆಹಲಿ: ಮುಂದಿನ ದಿನಗಳಲ್ಲಿ ರೈಲು ಪ್ರಯಾಣ ತುಸು ದುಬಾರಿಯಾಗಲಿದೆ. ದೂರ ಪ್ರಯಾಣದ ಟಿಕೆಟ್ ದರಗಳಲ್ಲಿ ಅಲ್ಪ ಏರಿಕೆ ಮಾಡಲು ಭಾರತೀಯ ರೈಲ್ವೇಸ್ ನಿರ್ಧರಿಸಿದೆ. ಉಪನಗರ (ಸಬರ್ಬನ್) ರೈಲುಗಳ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪರಿಷ್ಕೃತ ದರಗಳು ಡಿಸೆಂಬರ್ 26ರಿಂದ ಜಾರಿಗೆ ಬರಲಿವೆ.
ವರದಿಗಳ ಪ್ರಕಾರ, 215 ಕಿಲೋಮೀಟರ್ ವರೆಗಿನ ಸಾಮಾನ್ಯ ವರ್ಗ (ಜನರಲ್ ಕ್ಲಾಸ್) ಪ್ರಯಾಣಿಕರ ಟಿಕೆಟ್ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ 215 ಕಿಲೋಮೀಟರ್ ಮೀರಿದ ಪ್ರಯಾಣಕ್ಕೆ ಪ್ರತೀ ಕಿಲೋಮೀಟರ್‌ಗೆ 1 ಪೈಸೆಯಷ್ಟು ದರ ಏರಿಕೆ ಮಾಡಲಾಗಿದೆ. ಅಂದರೆ ಪ್ರತೀ 100 ಕಿಲೋಮೀಟರ್ ಹೆಚ್ಚುವರಿ ದೂರಕ್ಕೆ 1 ರೂಪಾಯಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ.
ಇನ್ನೂ ಎಸಿ ಕೋಚ್‌ಗಳ ಟಿಕೆಟ್ ದರವನ್ನು ಪ್ರತೀ ಕಿಲೋಮೀಟರ್‌ಗೆ 2 ಪೈಸೆಯಷ್ಟು ಹೆಚ್ಚಿಸಲಾಗಿದೆ. ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳಲ್ಲಿನ ನಾನ್-ಎಸಿ ಕೋಚ್‌ಗಳಿಗೂ ಇದೇ ಪ್ರಮಾಣದ ದರ ಏರಿಕೆ ಜಾರಿಯಾಗಲಿದೆ. ಈ ಕೋಚ್‌ಗಳಲ್ಲಿ ಪ್ರತೀ 50 ಕಿಲೋಮೀಟರ್ ದೂರಕ್ಕೆ 1 ರೂಪಾಯಿ ಹೆಚ್ಚುವರಿ ಶುಲ್ಕ ಸೇರಲಿದೆ.
ಈ ಪರಿಷ್ಕೃತ ದರದ ಬಳಿಕವೂ ಭಾರತದಲ್ಲಿ ರೈಲು ಪ್ರಯಾಣ ಇತರೆ ಸಾರಿಗೆ ವ್ಯವಸ್ಥೆಗಳಿಗಿಂತ ಕಡಿಮೆ ವೆಚ್ಚದಲ್ಲೇ ಇರುತ್ತದೆ ಎಂದು ರೈಲ್ವೆ ತಿಳಿಸಿದೆ. ಈ ಅಲ್ಪ ದರ ಏರಿಕೆಯಿಂದ ಭಾರತೀಯ ರೈಲ್ವೆಗೆ ವಾರ್ಷಿಕವಾಗಿ ಸುಮಾರು 600 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯ ಲಭ್ಯವಾಗುವ ನಿರೀಕ್ಷೆಯಿದೆ.



