ಭಾರತೀಯ ಯೋಗವು ನಿಸ್ವಾರ್ಥ ಸೇವೆಯ ಸಂಕೇತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರು ಯೋಗದ ಬೇಡಿಕೆ ಕಂಡು ಅದನ್ನು ವ್ಯಾಪಾರೀಕರಣಗೊಳಿಸಿದ್ದಾರೆ. ಆದರೆ, ಭಾರತವು ಜಗತ್ತಿಗೆ ನೀಡಿದ ಅಗ್ರಗಣ್ಯ ಕೊಡುಗೆಯಾಗಿರುವ ಯೋಗವು ಮೂಲತಃ ನಿಸ್ವಾರ್ಥ ಸೇವೆಯ ಸಂಕೇತವಾಗಿದೆ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ನುಡಿದರು.

Advertisement

ಅವರು ಸೋಮವಾರ ಇಲ್ಲಿನ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಶಿವಾನುಭವ ಮಂಟಪದಲ್ಲಿ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಯೋಗ ಪಾಠಶಾಲೆಯ ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳನ್ನು ಸ್ಮರಿಸಬೇಕಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗ ಹಾಗೂ ಆಯುರ್ವೇದದಂಥಹ ಪಾರಂಪರಿಕ ಚಿಕಿತ್ಸಾ ಪದ್ಧತಿಗಳ ಅನಿವಾರ್ಯತೆ ಇದೆ. ಇಷ್ಟು ದಿನ ದೈಹಿಕ ಬಳಲುವಿಕೆಗಾಗಿ ಮಾತ್ರ ಯೋಗ ಚಿಕಿತ್ಸಕ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಯೋಗದ ಮಾನಸಿಕ ಹಾಗೂ ಆಧ್ಯಾತ್ಮಿಕ ಲಾಭಗಳ ಮಜಲುಗಳು ಅನಾವರಣಗೊಂಡಿವೆ. ಯೋಗ ಪಾಠಶಾಲೆಯು 50 ವಸಂತಗಳನ್ನು ಪೂರೈಸಿರುವುದು ಸಂತಸದ ಸಂಗತಿಯಾಗಿದ್ದು, ಕೆ.ಎಸ್. ಪಲ್ಲೇದ ಅವರ ಪರಿಶ್ರಮ ಹಾಗೂ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಈ ಸಂಸ್ಥೆ ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ಕ.ವಿ.ವಿ ಯೋಗ ಅಧ್ಯಯನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ. ಲಕ್ಷ್ಮಣ ಕುಮಾರ ಸಣ್ಣೆಲ್ಲಪ್ಪನವರ ಅವರ ಕುರಿತಾದ `ದಿ ಯೋಗಾ ಏಂಜೆಲ್’ ಅಭಿನಂದನಾ ಗ್ರಂಥವು ಲೋಕಾರ್ಪಣೆಗೊಳಿಸಿದ ಆನೆಗುಂದಿ ಸಂಸ್ಥಾನದ ವಿಜಯನಗರ ಸಾಮ್ರಾಜ್ಯದ ಅರವೀಡು ರಾಜವಂಶಸ್ಥರಾದ ರಾಜಾ ಶ್ರೀಕೃಷ್ಣದೇವರಾಯರು ಮಾತನಾಡಿ, ತೋಂಟದಾರ್ಯ ಮಠವು ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾಗಿದ್ದು, ಅದರ ಅಂಗವಾದ ಈ ಯೋಗಪಾಠಶಾಲೆಯು ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಯೋಗಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿರುವ ಶ್ರೀಯುತ ಸಣ್ಣೆಲ್ಲಪ್ಪನವರ ಅವರ ಕುರಿತ ಗ್ರಂಥ ಬಿಡುಗಡೆಗೊಳಿಸಿರುವುದು ಸಂತಸ ನೀಡಿದ್ದು, ಭಾರತದ ಅಮೂಲ್ಯ ಪರಂಪರೆಯ ಕೊಂಡಿಯಾಗಿರುವ ಯೋಗವನ್ನು ಉಳಿಸಿ-ಬೆಳೆಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ನರರೋಗ ತಜ್ಞರಾದ ಡಾ. ಸಂತೋಷ ಎನ್.ಎಸ್ ಯೋಗ ಹಾಗೂ ಧ್ಯಾನದ ಕುರಿತು ವಿಶೇಷ ಉಪನ್ಯಾಸ ನೀಡಿ, ಇತ್ತೀಚೆಗೆ ಯುವಜನರ ಜೀವನಶೈಲಿಯಿಂದ ರೋಗಗಳು ಸಾಮಾನ್ಯವಾಗಿದ್ದು, ಯೋಗ-ಧ್ಯಾನದಿಂದ ಇಂಥಹ ಉಪದ್ರವಗಳನ್ನು ನಿವಾರಿಸಬಹುದು. ಭಗವದ್ಗೀತೆಯಲ್ಲೂ ಯೋಗದ ಉಲ್ಲೇಖವಿದ್ದು, ಮನಸ್ಸಿನ ದುಗುಡಗಳು-ತಲ್ಲಣಗಳನ್ನು ನಿವಾರಿಸಿ ನೆಮ್ಮದಿಯುತ ಜೀವನ ನಡೆಸಲು ಯೋಗ-ಧ್ಯಾನಗಳು ದಿವ್ಯ ಔಷಧಗಳಾಗಿವೆ ಎಂದರು.

ಹುಬ್ಬಳ್ಳಿ ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯದ ಎಕ್ಸಿಕ್ಯೂಟಿವ್ ಡೀನ್ ಪ್ರೊ. ಬಿ.ಎಲ್. ದೇಸಾಯಿ ಮಾತನಾಡಿದರು.

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಡೂರಿನ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಎಸ್. ಪಟ್ಟಣಶೆಟ್ಟರ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಪಾಠಶಾಲೆಯ ಯೋಗಸಾಧಕರು, ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಜರುಗಿತು.

ಯೋಗಾಚಾರ್ಯ ಕೆ.ಎಸ್. ಪಲ್ಲೇದ, ಡಾ. ಮಲ್ಲಿಕಾರ್ಜುನ ಐಹೊಳಿ, ಎಂ.ಎಸ್. ಶಿರಿಯಣ್ಣವರ, ಡಾ. ವಿ.ಎಂ. ಮುಂದಿನಮನಿ, ಐ.ಬಿ. ಕೊಟ್ಟೂರಶೆಟ್ಟರ, ಕೆಯುಡಿ ಡೀನ್ ಎಂ.ಪಿ. ರಮೇಶ, ಎ.ಇ.ಕಾಂ ತಾಂತ್ರಿಕ ನಿರ್ದೇಶಕರಾದ ಶ್ರೀಕಂಠ ಚೌಕಿಮಠ, ಚಂದ್ರಮೌಳಿ ನಾಯ್ಕರ್, ಶೇಖಣ್ಣ ಕವಳಿಕಾಯಿ, ಸಂಗಮೇಶ ಮೇಲ್ಮುರಿ, ಅಮರೇಶ ಅಂಗಡಿ, ಐ.ಬಿ. ಬೆನಕೊಪ್ಪ, ಡಾ. ಧನೇಶ ದೇಸಾಯಿ, ಎಂ.ಎಸ್. ಅಂಗಡಿ, ವಿನೋದ ಚಪ್ಪರಳ್ಳಿಮಠ ಸೇರಿದಂತೆ ಯೋಗಪಾಠಶಾಲೆಯ ವಿದ್ಯಾರ್ಥಿಗಳು, ಯೋಗಾಸಕ್ತರು ಹಾಜರಿದ್ದರು.

`ಯೋಗ ದೀಪ್ತಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ. ಸಂಕನೂರ ಮಾತನಾಡಿ, ಯೋಗ ಈ ದೇಶದ ಆಸ್ತಿಯಾಗಿದ್ದು, ಈ ಹಿಂದೆ ಭಾರತಕ್ಕೆ ಸೀಮಿತವಾಗಿದ್ದ ಯೋಗವು ಇಂದು ಪ್ರಧಾನಿಗಳ ವಿಶೇಷ ಆಸಕ್ತಿಯಿಂದ ವಿಶ್ವಮಾನ್ಯತೆ ಪಡೆದುಕೊಂಡಿದೆ. ಇಂದಿನ ದಿನಗಳಲ್ಲಿ ಎಲ್ಲರೂ ಒತ್ತಡದಲ್ಲಿ ಬದುಕುವ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯ ಕನಿಷ್ಠ ಅರ್ಧಗಂಟೆ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಭಾಗ್ಯ ವೃದ್ಧಿಸಿಕೊಳ್ಳಲು ಸಾಧ್ಯ ಎಂದರು.


Spread the love

LEAVE A REPLY

Please enter your comment!
Please enter your name here