ನವದೆಹಲಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತೀಯ ಸೇನೆಯ ಶಕ್ತಿಯುತ ಸಾಮರ್ಥ್ಯವನ್ನು ಪ್ರದರ್ಶಿಸುವ ಭವ್ಯ ಮೆರವಣಿಗೆ ನಡೆಯಿತು. ದೇಶದ ರಕ್ಷಣಾ ಶಕ್ತಿ, ಆಧುನಿಕ ಶಸ್ತ್ರಾಸ್ತ್ರಗಳು ಹಾಗೂ ತಂತ್ರಜ್ಞಾನ ಸಾಮರ್ಥ್ಯವನ್ನು ಈ ಮೆರವಣಿಗೆಯಲ್ಲಿ ಜನತೆಗೆ ಪರಿಚಯಿಸಲಾಯಿತು.
ಮೆರವಣಿಗೆಯಲ್ಲಿ ಆಪರೇಷನ್ ಸಿಂಧೂರ್ ಟ್ಯಾಬ್ಲೋ ವಿಶೇಷ ಆಕರ್ಷಣೆಯಾಗಿ ಕಾಣಿಸಿಕೊಂಡಿತು. ಇದೇ ಮೊದಲ ಬಾರಿಗೆ ಸೇನೆಯ ಡ್ರೋನ್ ತಂತ್ರಜ್ಞಾನವನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸಲಾಗಿದ್ದು, ಸೇನೆಯ ಆಧುನಿಕೀಕರಣದ ಸಂಕೇತವಾಗಿ ಗಮನ ಸೆಳೆಯಿತು.
ಗರುಡಾ ಫಾರ್ಮೇಷನ್‌ನಲ್ಲಿ ಅಪಾಚೆ ಮತ್ತು ಧ್ರುವ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಕೌಶಲ್ಯ ಪ್ರದರ್ಶಿಸಿದರೆ, ಭೂಮಿಯಲ್ಲಿ T-90 ಭೀಷ್ಮ ಟ್ಯಾಂಕ್, ನಾಗ್ ಕ್ಷಿಪಣಿ ವ್ಯವಸ್ಥೆ, ಶಕ್ತಿಬಾನ್ ಮತ್ತು ದಿವ್ಯಾಸ್ತ್ರ, ಧನುಷ್ ಹಾಗೂ ಅಮೋಘ್ ಸಿಸ್ಟಮ್, ಸೂರ್ಯಾಸ್ತ್ರ ರಾಕೆಟ್ ಲಾಂಚರ್, ಬ್ರಹ್ಮೋಸ್ ಸೂಪರ್ ಸಾನಿಕ್ ಮಿಸೈಲ್ ವೆಪನ್ ಸಿಸ್ಟಮ್, ಆಕಾಶ್ ಹಾಗೂ ಅಭರ ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳ ಪ್ರದರ್ಶನ ನಡೆಯಿತು.
ಇದರ ಜೊತೆಗೆ ವಂದೇ ಮಾತರಂ ಗೀತೆಯ 150ನೇ ವರ್ಷದ ಆಚರಣೆ, ದೇಶದ ಅಭಿವೃದ್ಧಿ ಪಯಣ ಹಾಗೂ ಭಾರತದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನೂ ಪ್ರದರ್ಶಿಸಲಾಯಿತು.
ಈ ಭವ್ಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.



