ಬೆಂಗಳೂರು: ಇಂಡಿಗೋ ವಿಮಾನಗಳ ಹಾರಾಟದಲ್ಲಿ ಕಳೆದ ಒಂದು ವಾರದಿಂದ ದೇಶಾದ್ಯಂತ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಬಿಸಿ ಬಿಎಂಟಿಸಿ ಗೂ ತಟ್ಟಿದ್ದು, ಒಂದೇ ವಾರದಲ್ಲಿ ಸುಮಾರು ₹50 ಲಕ್ಷ ನಷ್ಟ ಉಂಟಾಗಿದೆ.
ಸಾಮಾನ್ಯವಾಗಿ ಪ್ರಯಾಣಿಕರಿಂದ ಕಿಕ್ಕಿರಿದು ಕಾಣಿಸುವ ಮೆಜೆಸ್ಟಿಕ್‌ನ ಏರ್‌ಪೋರ್ಟ್ ಬಸ್ ನಿಲ್ದಾಣ ಈಗ ಬಣಗಟ್ಟಿದ್ದು, ವೋಲ್ವೋ ಬಸ್‌ಗಳೂ ಬಹುತೇಕ ಖಾಲಿಯಾಗಿ ಸಂಚರಿಸುತ್ತಿವೆ. ಒಂದೇ ಬಸ್‌ನಲ್ಲಿ 35 ಆಸನಗಳು ಭರ್ತಿಯಾಗುವುದೇ ಕಷ್ಟವಾಗಿದೆ.
ಬಿಎಂಟಿಸಿ ದಿನನಿತ್ಯದ ಬಸ್‌ಗಳ ಸಂಖ್ಯೆಯನ್ನು ಕಡಿಮೆಯಾಗಿಸದೇ ಇದ್ದರೂ, ಪ್ರಯಾಣಿಕರ ಸಂಖ್ಯೆ ಕುಸಿದಿರುವುದರಿಂದ ಪ್ರತಿದಿನ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗುತ್ತಿದೆ. ಡಿಸೆಂಬರ್ 1ರಿಂದ ಇಂಡಿಗೋ ಫ್ಲೈಟ್ ಸಮಸ್ಯೆ ತೀವ್ರಗೊಂಡಿದ್ದು, ದಿನೇದಿನೇ ಏರ್‌ಪೋರ್ಟ್ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಈ ಹಿಂದೆ ಪ್ರತಿದಿನ 156 ಏರ್‌ಪೋರ್ಟ್ ವೋಲ್ವೋ ಬಸ್‌ಗಳು 1,150 ಟ್ರಿಪ್‌ಗಳನ್ನು ನಡೆಸುತ್ತಿದ್ದು, ಸುಮಾರು 10,000 ಪ್ರಯಾಣಿಕರು ಸೇವೆ ಬಳಸುತ್ತಿದ್ದರು. ಆದರೆ ಇದೀಗ 3,000–4,000 ಪ್ರಯಾಣಿಕರಷ್ಟು ಕುಸಿತ ದಾಖಲಾಗಿದೆ. ಇಂಡಿಗೋ ವಿಮಾನಗಳ ತಾಂತ್ರಿಕ ಸಮಸ್ಯೆಗಳ ಪರಿಹಾರವಾಗುವವರೆಗೆ ಈ ನಷ್ಟ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.



