ಬೆಂಗಳೂರು:- ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಸಂಚಾರ ಸಹಜ ಸ್ಥಿತಿಗೆ ಮರಳುತ್ತಿದೆ.
ಕಳೆದ ಕೆಲವು ದಿನಗಳಿಂದ ತೀವ್ರ ವ್ಯತ್ಯಯ ಕಂಡಿದ್ದ ವಿಮಾನ ಸಂಚಾರ ಇಂದು ಬೆಳಗ್ಗೆಯಿಂದಲೇ ಭಾಗಶಃ ಸರಾಗವಾಗಿರುವುದು ಪ್ರಯಾಣಿಕರಿಗೆ ಸ್ವಲ್ಪ ನೆಮ್ಮದಿ ನೀಡಿದೆ. ಇಂದು ಬೆಳಗ್ಗೆಯಿಂದಲೇ ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಇಂಡಿಗೋ ವಿಮಾನಗಳ ಹಾರಾಟ ಪುನರಾರಂಭಗೊಂಡಿದೆ. ಹೀಗಾಗಿ ಪ್ರಯಾಣಿಕರಿಗೆ ತುಸು ನೆಮ್ಮದಿ ತಂದಿದೆ.
ವೀಕೆಂಡ್ ಮುಗಿದ ಪರಿಣಾಮ ಹೆಚ್ಚಿನ ಪ್ರಯಾಣಿಕರು ಏರ್ಪೋರ್ಟ್‌ಗೆ ಆಗಮಿಸಿದ್ದಾರೆ. ಡಿಪಾರ್ಚರ್ ಗೇಟ್‌ಗಳ ಮುಂದೆ ಟಿಕೆಟ್ ಹಿಡಿದು ಸರದಿ ಸಾಲಿನಲ್ಲಿ ನಿಂತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಭಾನುವಾರ ಸಂಜೆಯಿಂದಲೇ ಏರ್ಪೋರ್ಟ್‌ಗೆ ಆಗಮಿಸುವವರ ಸಂಖ್ಯೆ ಏರಿಕೆಯಾಗಿದೆ ಎಂದು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ದೆಹಲಿ, ಲಖನೌ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ ಸೇರಿದಂತೆ ವಿವಿಧೆಡೆಗೆ ತೆರಳಬೇಕಿದ್ದ 60ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ. ವಿಮಾನ ರದ್ದು ಬಗ್ಗೆ 5 ಗಂಟೆ ಮುಂಚಿತವಾಗಿ ಪ್ರಯಾಣಿಕರಿಗೆ ಸಂದೇಶ ಕಳುಹಿಸಲಾಗಿದೆ. ಹೀಗಾಗಿ ಪ್ರಯಾಣಿಕರು ಏರ್ಪೋರ್ಟ್‌ಗೆ ಬಂದಿಲ್ಲ ಎನ್ನಲಾಗಿದೆ.



