ವಿಜಯಸಾಕ್ಷಿ ಸುದ್ದಿ, ಗದಗ: ಇಂದಿರಾ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಹಣ ಹಾಗೂ ಪ್ರಭಾವದ ಮೇಲೆ ಗೆದ್ದಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿ, ಸಂಸದ ಸ್ಥಾನದಿಂದ ಅವರನ್ನು ವಜಾಗೊಳಿಸಿತ್ತು. ಇದರಿಂದ ಕೆರಳಿದ ಇಂದಿರಾ ೩೮ನೇ ವಿಧಿ ತಿದ್ದುಪಡಿ ತಂದು ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಕಗ್ಗೊಲೆ ಮಾಡಿದರು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.
ಗುರುವಾರ ಕೆಎಸ್ಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿಯ ಅಣುಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ಜನರ ಸ್ವಾತಂತ್ರ್ಯ ಕಸಿದುಕೊಂಡರು. ಸಂಜಯ್ ಗಾಂಧಿ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿ ಇರದಿದ್ದರೂ ಸಾರ್ವಜನಿಕರ ಮೇಲೆ ದರ್ಪ, ದಬ್ಬಾಳಿಕೆಯನ್ನು ಮಾಡುತ್ತಿದ್ದರು. ರಾಷ್ಟ್ರದ ವ್ಯವಸ್ಥೆಯನ್ನು ಒಂದು ಕುಟುಂಬದ ಕೈಯಲ್ಲಿ ಇಡುವ ಹುನ್ನಾರವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದರು ಎಂದು ಕಿಡಿಕಾರಿದರು.
ಇವತ್ತು ಇಂದಿರಾ ಗಾಂಧಿ ಮಗಳು, ಮೊಮ್ಮಕ್ಕಳು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ದೇಶದ ತುಂಬೆಲ್ಲ ಓಡಾಡುತ್ತಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗಿತೆ ಎನ್ನುವಂತಿದೆ. ಕೇವಲ ರಾಜಕೀಯಕ್ಕಾಗಿ ಸಂವಿಧಾನದ ಪುಸ್ತಕ ಪ್ರದರ್ಶಿಸುತ್ತಾರೆಯೇ ಹೊರತು, ಅವರಿಗೆ ಸಂವಿಧಾನದ ಮೇಲೆ ಯಾವುದೇ ಗೌರವ ಇಲ್ಲ. ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಮರೇಶ, ಮುಖಂಡರಾದ ಅಡವಿಸ್ವಾಮಿ ಹಿರೇಮಠ, ಪುನೀತ್ ದಂಡಿನ್, ಲಿಂಗರಾಜಗೌಡ ಪಾಟೀಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ನಗರಸಭೆ ಸದಸ್ಯೆ ಶ್ವೇತಾ ದಂಡಿನ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ ಮುಂತಾದವರಿದ್ದರು.



