ಕೈಗಾರಿಕೆಗಳು ಕೃಷಿಗೆ ಪೂರಕವಾಗಿರಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕೃಷಿ ಹಾಗೂ ಪರಿಸರ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕೃಷಿಯನ್ನು ಉಳಿಸಿ ಬೆಳೆಸಲು, ಅದರ ಗುಣಮಟ್ಟವನ್ನು ಕಾಪಾಡಲು ಪರಿಸರವನ್ನು ಉಳಿಸುವುದು ಅನಿವಾರ್ಯವಾಗಿದೆ ಎಂದು ಪ್ರಗತಿಪರ ಕೃಷಿಕರು ಹಾಗೂ ಯುವ ನಾಯಕರಾದ ಶಿವಕುಮಾರಗೌಡ ಪಾಟೀಲ ನುಡಿದರು.

Advertisement

ಅವರು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕೃಷಿ ಮೇಳ, ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕೃಷಿಯ ಬಗ್ಗೆ ಅಪಾರ ಆಸಕ್ತಿ ಹಾಗೂ ಜ್ಞಾನ ಹೊಂದಿದ್ದ ಲಿಂ.ಸಿದ್ಧಲಿಂಗ ಮಹಾಸ್ವಾಮಿಗಳು ಪ್ರತಿವರ್ಷ ಶ್ರೀಮಠದ ಜಾತ್ರೆಯಲ್ಲಿ ಕೃಷಿಯನ್ನು ಪ್ರೋತ್ಸಾಹಿಸುವ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ಭಾಗದ ಅಮೂಲ್ಯ ನೈಸರ್ಗಿಕ ಸಂಪತ್ತಾದ ಕಪ್ಪತಗುಡ್ಡವನ್ನು ರಕ್ಷಿಸಿದ್ದಲ್ಲದೇ ಗಣಿಗಾರಿಕೆಯಿಂದ ನೂರಾರು ಎಕರೆ ಜಮೀನುಗಳನ್ನು ರಕ್ಷಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಣಿಗಾರಿಕೆ ಎಂತಹ ನೈಸರ್ಗಿಕ ಸ್ಥಿತ್ಯಂತರ ಮಾಡಿದೆ ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಈ ಭಾಗದಲ್ಲಿ ಕೈಗಾರಿಕೆ ಬರುವುದಾದರೆ ಅದು ಕೃಷಿಗೆ ಪೂರಕವಾಗಿರಬೇಕು. ಕೃಷಿಯನ್ನು ಹೊರತುಪಡಿಸಿ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರದೇ ನಾವೇ ಸ್ವಯಂ ಪ್ರೇರಣೆಯಿಂದ ಕೃಷಿಯಲ್ಲಿ ನಾವೀನ್ಯತೆ ತರಬೇಕಿದೆ ಎಂದರು.

ಮಲ್ಲಯ್ಯ ಗುರುಬಸಪ್ಪನಮಠ ಸಂಗ್ರಹಿಸಿದ ಹಳೆಯ ಕೃಷಿ ಸಲಕರಣೆಗಳ ಪ್ರದರ್ಶನ ಜನಮನ ಸೆಳೆಯಿತು. ಜಾತ್ರೆಯ ನಿಮಿತ್ತ ಏರ್ಪಡಿಸಲಾದ ಜಾನುವಾರು ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಕೃಷಿ ಅಧಿಕಾರಿ ಡಾ. ಸುರೇಶ ಕುಂಬಾರ, ಜಾತ್ರಾ ಸಮಿತಿ ಅಧ್ಯಕ್ಷರಾದ ಡಾ. ಧನೇಶ ದೇಸಾಯಿ, ಉಪಾಧ್ಯಕ್ಷೆ ಶೈಲಾ ಕೋಡೆಕಲ್ಲ, ಗೋಣಿಬಸಪ್ಪ ಕೊರ್ಲಹಳ್ಳಿ, ರುದ್ರಣ್ಣ ಗುಳಗುಳಿ ಸೇರಿದಂತೆ ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.

ಸಾನ್ನಿಧ್ಯ ವಹಿಸಿದ್ದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯಂತೆ ಕೃಷಿ ದೇಶದ ಪ್ರಧಾನ ವೃತ್ತಿಯಾಗಿದೆ. ರೈತನ ತನು-ಮನ-ಭಾವ ಶುದ್ಧ. ಆತ ಶ್ರೇಷ್ಠ ಭಕ್ತ ಎಂದು ವಿಶ್ವಗುರು ಬಸವೇಶ್ವರರು ತಮ್ಮ ವಚನಗಳಲ್ಲಿ ಬಣ್ಣಿಸಿದ್ದಾರೆ. ರೈತರಿಗೆ ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವನ್ನು ಜಾತ್ರಾ ಸಮಿತಿ ಹಮ್ಮಿಕೊಂಡಿದ್ದು, ಕೃಷಿ ಕುರಿತು ಕಾರ್ಯಕ್ರಮಗಳಲ್ಲಿ ರೈತರು ನಿರಾಸಕ್ತಿ ವಹಿಸಬಾರದು. ಕೃಷಿಯಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು, ತಂತ್ರಜ್ಞಾನಗಳನ್ನು ಗಮನಿಸಿ ಅವುಗಳನ್ನು ಅಳವಡಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.


Spread the love

LEAVE A REPLY

Please enter your comment!
Please enter your name here