ಬೆಂಗಳೂರು: ರಾಜ್ಯದಲ್ಲಿ ಸುಮಾರು 14 ಲಕ್ಷ ಮಂದಿ ಎಪಿಎಲ್ ವರ್ಗಕ್ಕೆ ಸೇರಬೇಕಾದವರು ಬಿಪಿಎಲ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದ್ದು, ಇಂತಹ ಕಾರ್ಡ್ಗಳನ್ನು ಹಂತ ಹಂತವಾಗಿ ರದ್ದುಪಡಿಸಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಅನಧಿಕೃತ ಬಿಪಿಎಲ್ ಕಾರ್ಡ್ಗಳಿವೆ ಎಂಬ ವರದಿ ನೀಡಿರುವ ಹಿನ್ನೆಲೆ ಪ್ರತಿಕ್ರಿಯಿಸಿದರು.
ನಿಯಮಗಳನ್ನು ಮೀರಿ ಎಪಿಎಲ್ ವರ್ಗದವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಗಮನಕ್ಕೆ ಬಂದಿದೆ. ಸುಮಾರು 7 ಲಕ್ಷ ಕಾರ್ಡ್ಗಳು ಈ ರೀತಿಯಾಗಿ ಮಾಡಿಸಿಕೊಂಡಿದ್ದಾರೆ ಎಂಬ ವರದಿ ಇದ್ದು, ಒಟ್ಟು ಸುಮಾರು 14 ಲಕ್ಷ ಮಂದಿ ಎಪಿಎಲ್ಗೆ ಸೇರಬೇಕಾದರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಅವುಗಳನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಹಂತ ಹಂತವಾಗಿ ರದ್ದುಪಡಿಸಲಾಗುತ್ತದೆ ಎಂದರು.
ನಿಜವಾಗಿಯೂ ಬಿಪಿಎಲ್ ಕಾರ್ಡ್ಗೆ ಅರ್ಹರಾದವರ ಹೆಸರನ್ನು ಯಾವುದೇ ಕಾರಣಕ್ಕೂ ತೆಗೆದುಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರಾದರೂ ಅರ್ಹರಾಗಿದ್ದರೂ ಅವರ ಹೆಸರು ತೆಗೆದುಹಾಕಲ್ಪಟ್ಟಿದ್ದರೆ, ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದರೆ ಮರುಪರಿಶೀಲನೆ ಮಾಡಿ ಕಾರ್ಡ್ ನೀಡಲಾಗುತ್ತದೆ ಎಂದರು.
ಇನ್ನೂ ಎಪಿಎಲ್ ಕಾರ್ಡ್ ಹೊಂದಿರುವವರ ಮೇಲೆ ಸದ್ಯ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಆದರೆ ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಅನರ್ಹರು ಕಂಡುಬಂದರೆ, ಅವರನ್ನು ಎಪಿಎಲ್ ವರ್ಗಕ್ಕೆ ವರ್ಗಾಯಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.



