ಬೆಂಗಳೂರು: ಪಕ್ಕದ ಮನೆಯ ಸಾಕು ನಾಯಿಯೊಂದು ಬೊಗಳಿದ ಕಾರಣಕ್ಕೆ ವ್ಯಕ್ತಿಯೊಬ್ಬ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅವರೆಹಳ್ಳಿಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ನಾಯಿಗೆ ಗಂಭೀರ ಗಾಯಗಳಾಗಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ.
ಆಂಜಿನಪ್ಪ ಎಂಬುವವರಿಗೆ ಸೇರಿದ “ಸ್ಕೂಬಿ” ಎಂಬ ಸಾಕು ನಾಯಿ, ನಿನ್ನೆ ಸಂಜೆ ಪಕ್ಕದ ಮನೆಯ ಮಹಿಳೆಯನ್ನು ನೋಡಿ ಬೊಗಳಿದಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪತಿ ಗೋಪಿ, ರಾತ್ರಿ ವೇಳೆ ಆಂಜಿನಪ್ಪ ಅವರ ಮನೆಗೆ ತೆರಳಿ ಗೇಟಿಗೆ ಕಟ್ಟಿದ್ದ ನಾಯಿಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ.
ಆರೋಪಿಯ ಹೊಡೆತಕ್ಕೆ ನಾಯಿ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದೆ. ತಕ್ಷಣವೇ ಮಾಲೀಕ ಆಂಜಿನಪ್ಪ ನಾಯಿ ಆಸ್ಪತ್ರೆಗೆ ಕರೆದೊಯ್ದಿದ್ದು, ಸದ್ಯ ಚಿಕಿತ್ಸೆ ಬಳಿಕ ಸ್ಕೂಬಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ನಾಯಿಗೆ ಹಲ್ಲೆ ನಡೆದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



