ಕಲಬುರಗಿ: ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಲೋ ಬಿಪಿಯಾಗಿ ಹೃದಯಾಘಾತದಿಂದ ಕಾರ್ಮಿಕ ಸಾವನ್ನಪ್ಪಿದ್ದು, ಸಿಬ್ಬಂದಿಗಳು ಮೃತಪಟ್ಟ ಕಾರ್ಮಿಕನ ಮೃತದೇಹವನ್ನ ದರದರನೇ ನಾಯಿ ಹೆಣದ ಹಾಗೇ ಎಳೆದುಕೊಂಡು ಹೋದ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೊಡ್ಲಾ ಗ್ರಾಮದ ಬಳಿಯಿರೋ ಶ್ರೀ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ.
ಬಿಹಾರ ಮೂಲದ ಚಂದನಸಿಂಗ್ (35) ಮೃತ ದುದೈವಿ. ಚಂದನಸಿಂಗ್ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಕರ್ತವ್ಯನಿರತ ವೇಳೆ ಲೋ ಬಿಪಿಯಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ಕಾರ್ಮಿಕ ಚಂದನಸಿಂಗ್ ಮೃತದೇಹವನ್ನು ಸಿಬ್ಬಂದಿ ದರದರನೇ ಎಳೆದುಕೊಂಡು ಹೋಗಿದ್ದಾರೆ. ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಪೊಲೀಸರು ಆರು ಜನ ಕಾರ್ಮಿಕರನ್ನು ಬಂಧಿಸಿದ್ದಾರೆ. ಹೈದರ್ ಅಲಿ, ಅಜಯ, ರವಿಶಂಕರ್, ಹರಿಂದರ್ ನಿಶಾದ್, ರಮೇಶ್‌ಚಂದ್ರ ಹಾಗೂ ಅಖಿಲೇಶ್ ಬಂಧಿತರು.
ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸೇಡಂ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.